ಬೆಂಗಳೂರು: ಬಿಜೆಪಿ ನಾಯಕ, ಮಾಜಿ ಸಚಿವ ಎ.ಮಂಜು ಇಂದು ಫೇಸ್‍ಬುಕ್ ನಲ್ಲಿ ಮುಖ್ಯಮಂತ್ರಿಗಳಿಗೆ ಸುದೀರ್ಘವಾದ ಪತ್ರ ಬರೆದಿದ್ದಾರೆ. ಪತ್ರದ ಮೂಲಕ ರಾಜೀನಾಮೆ ನೀಡಿ ಹೊರ ಬನ್ನಿ ಎಂದು ಎ.ಮಂಜು ಮನವಿ ಮಾಡಿಕೊಂಡಿದ್ದಾರೆ.
ಪತ್ರದಲ್ಲಿ ಏನಿದೆ?
ಸನ್ಮಾನ್ಯ ಮುಖ್ಯಮಂತ್ರಿಗಳಿಗೊಂದು ಕಳಕಳಿಯ ಮನವಿ. ಸರ್ ನೀವು ಕನ್ನಡಿಗರ ಕಣ್ಮಣಿ ಆಗಿದ್ದವರು ಎಂದು ಬಳಸಲು ಸಕಾರಣವಿದೆ. ನೀವು ರಾಜ್ಯ ಕಂಡ ವಿಶೇಷ ರಾಜಕಾರಣಿ. ಮೊದಲ ಬಾರಿಗೆ ಶಾಸಕರಾಗಿ ಸಿಎಂ ಆದ ದಾಖಲೆ ನಿಮ್ಮ ಹೆಸರಲ್ಲೇ ಇದೆ. 2006ರ 20-20 ಸರ್ಕಾರದ ಸಮಯದಲ್ಲಿ ನೀವು ತೋರಿಸಿದ ಕಾರ್ಯ ಕ್ಷಮತೆ ಅನುಕರಣೀಯ. ಜನನಾಯಕ ಅಂದರೆ ಹೀಗಿರಬೇಕು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ತಾವು ಮಾಡುತ್ತಿರುವುದು ಏನು? ಯಾವ ಸಂದೇಶವನ್ನು ಮುಂದಿನ ಪೀಳಿಗೆಗೆ ನೀಡುತ್ತಿದ್ದೀರಾ? ಒಮ್ಮೆ ನಿಮ್ಮ ಪಟಾಲಂನ್ನು ದೂರವಿಟ್ಟು ಏಕಾಂತದಲ್ಲಿ ಕುಳಿತು ಯೋಚಿಸಿ.
Advertisement
Advertisement
ನಿಮ್ಮ ರಾಜಕೀಯ ಜೀವನದ ಮೊದಲ ವಿಲನ್ ಸಹೋದರ ಹೆಚ್.ಡಿ ರೇವಣ್ಣ. ಸಮ್ಮಿಶ್ರ ಸರ್ಕಾರದ ಇವತ್ತಿನ ಸ್ಥಿತಿಗೆ ರೇವಣ್ಣ ಕೊಡುಗೆ ಅಪಾರ. ಆತ ಹುಟ್ಟುತ್ತಾ ಸಹೋದರರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿಗೆ ಅನ್ವರ್ಥನಾಗಿದ್ದಾನೆ. ನಿಮ್ಮನ್ನು ಆತ ವ್ಯವಸ್ಥಿತವಾಗಿ ಹಂತ ಹಂತವಾಗಿ ಮುಗಿಸಿಯೇ ಬಿಟ್ಟ. ಅದು ನಿಮಗೆ ಗೊತ್ತಾಗಲೇ ಇಲ್ಲ. ಇರಲಿ ಈಗಲಾದರೂ ಅದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಭವಿಷ್ಯ ಉತ್ತಮವಾಗುವುದು. ಇನ್ನು ಮುಖ್ಯ ವಿಷಯಕ್ಕೆ ಬರುತ್ತೇನೆ. ಸದ್ಯ ಸದನದಲ್ಲಿ ನಿಮ್ಮ ವರ್ತನೆ ರಾಜ್ಯದ ಜನರಿಗೆ ಮಾತ್ರವಲ್ಲ ನಿಮ್ಮದೇ ಸಮುದಾಯದ ಜನರಿಗೆ ಅಸಹ್ಯ ತರಿಸಿದೆ. ಅಸಹ್ಯ ಒಂದು ಕಡೆಯಾದರೆ ಮತ್ತೊಂದು ಕಡೆ ಗಬ್ಬೆದ್ದು ಹೋಗಿರುವ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಶಾಸಕಾಂಗ ಕಾರ್ಯಾಂಗ ಪತ್ರಿಕಾರಂಗದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ನ್ಯಾಯಾಂಗ ಸಂವಿಧಾನದ ಮೇಲೆ ಇನ್ನು ನಂಬಿಕೆ ಇಟ್ಟಿದ್ದಾರೆ. ಆದರೆ ನೀವು ಅದನ್ನೇ ಬುಡಮೇಲು ಮಾಡಲು ಹೊರಟಿದ್ದೀರಾ? ನಿಮ್ಮ ವ್ಯಕ್ತಿತ್ವಕ್ಕೆ ಇದು ಶೋಭೆ ತರುವುದಿಲ್ಲ.
Advertisement
Advertisement
ರೇವಣ್ಣನಂತವನು ಇದನ್ನು ಮಾಡುವುದು ನಿರೀಕ್ಷಿತ. ಆದರೆ ತಾವು ಅವನಂತಲ್ಲ ಎಂದು ನಾನು ಭಾವಿಸಿದ್ದೇನೆ. ಅದಕ್ಕಾಗಿಯೇ ನಿಮಗೆ ಸೌಜನ್ಯವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ಕಾನೂನಿಗೆ ಗೌರವ ಕೊಡಿ. ಹಿಂದಿನ ನಿದರ್ಶನಗಳನ್ನು ನೋಡಿ. ತೀರಾ ಹಿಂದೆಯಲ್ಲ ನೀವು ಸಿಎಂ ಆಗುವ ಮುನ್ನ ಆದ ಘಟನೆಗಳನ್ನು ನೆನಪಿಸಿಕೊಳ್ಳಿ. ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯ ದಂಡನಾಯಕ ಸನ್ಮಾನ್ಯ ಬಿ.ಎಸ್ ಯಡಿಯೂರಪ್ಪ ಸಂವಿಧಾನಬದ್ಧವಾಗಿ ಸಿಎಂ ಆದರು. ಆದರೆ ರಾಜಕೀಯ ತಂತ್ರಗಳನ್ನು ಬಳಸಿ ಅವರು ವಿಶ್ವಾಸ ಮತ ಸಾಬೀತು ಮಾಡದಂತೆ ಮಾಡಿ ಒಂದೇ ದಿನದಲ್ಲಿ ಅವರನ್ನು ಕೆಳಗಿಳಿಸಿದ್ದೀರಿ. ಅವತ್ತಿನ ಉದಾಹರಣೆಯನ್ನೇ ನೋಡುವುದಾದರೂ ಅವತ್ತು ಯಡಿಯೂರಪ್ಪನವರಿಗೆ ನ್ಯಾಯಾಲಯ ಒಂದು ದಿನದಲ್ಲಿ ವಿಶ್ವಾಸ ಮತ ಯಾಚನೆ ಮಾಡಲು ಸೂಚಿಸಿತ್ತು.
104 ಜನ ಇದ್ದವರಿಗೆ ಬೇಕಾಗಿದ್ದು ಕೇವಲ 9 ಜನರ ಬೆಂಬಲ. ಆದರೆ ಎಲ್ಲಿ ಅದು ಸಿಕ್ಕಿ ಬಿಡುತ್ತದೋ ಎಂದು ಅದಕ್ಕೆ ಅವಕಾಶ ಕೊಡದೇ ಅವರನ್ನು ಇಳಿಸಿಬಿಟ್ಟಿರಿ. ಆದರೆ ಈಗ ನೀವು ಮಾಡ್ತಾ ಇರೋದು ಏನು ಸ್ವಾಮಿ? ಅದೇ ಕಾನೂನು ರಾಜ್ಯಪಾಲರು ಯಾರೇ ಹೇಳಿದರೂ ಕುರ್ಚಿಗೆ ಅಂಟಿಕೊಂಡು ಕೂರುವ ಕೆಟ್ಟ ಬುದ್ಧಿ ಅದ್ಯಾಕೆ ಬಂತು? ದಯಮಾಡಿ ಈಗಲೂ ಕಾಲ ಮಿಂಚಿಲ್ಲ. ನೀವು ಸದಾ ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ, ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದು ಹೇಳುತ್ತೀರಿ. ಅದನ್ನು ಕೇವಲ ಘೋಷಣೆಗೆ ಮಾತ್ರ ಸೀಮಿತಗೊಳಿಸದೇ ದಯಮಾಡಿ ಕಾರ್ಯ ರೂಪಕ್ಕೂ ತನ್ನಿ. ಮುಂದಿನ ಪೀಳಿಗೆಗೆ ಒಬ್ಬ ಒಳ್ಳೆಯ ಜನನಾಯಕರಾಗಿ ನೆನಪಿನಲ್ಲಿರಿ. ಕೆಟ್ಟ ಪರಂಪರೆಗೆ ಅಡಿಪಾಯ ಹಾಕಿ ಕೆಟ್ಟವರಾಗಿ ಬಿಂಬಿತರಾಗದಿರಿ. ಇನ್ನೂ ಕಾಲ ಮಿಂಚಿಲ್ಲ ನೀವೇ ಸ್ವಯಂಪ್ರೇರಿತರಾಗಿ ರಾಜೀನಾಮೆ ಕೊಡಿ ನಿಮ್ಮ ಗೌರವ ಉಳಿಸಿಕೊಳ್ಳಿ ಎಂದು ನಾನು ಗೌರವಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.
ಎ ಮಂಜು
ಮಾಜಿ ಸಚಿವರು