ಚಿಕ್ಕೋಡಿ: ಕೋರ್ಟ್ ಕಲಾಪ ನಡೆಯುವ ವೇಳೆ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಬೆಳಗಾವಿ ಜಿಲ್ಲೆಯ ಅಥಣಿ ನ್ಯಾಯಾಲಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೀನಾಕ್ಷಿ ರಾಮಚಂದ್ರ ಶಿಂಧೆ (50) ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೋತನಟ್ಟಿ ಗ್ರಾಮದ ಬಾಬಾಸಾಹೇಬ್ ಚೌಹಾನ್ ಎಂಬಾತ ಹಲ್ಲೆ ಮಾಡಿದ್ದ ಆರೋಪಿ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಬಾಬಾಸಾಹೇಬ್ ಸೋದರತ್ತೆ ಮೀನಾಕ್ಷಿ ಕೋರ್ಟ್ ಮೆಟ್ಟಿಲೇರಿದ್ದಳು. ಇದೇ ವಿಚಾರವಾಗಿ ಅನೇಕ ಬಾರಿ ಜಗಳವಾಗಿತ್ತು. ಇವತ್ತು ಮಹಿಳೆ ಬೆನ್ನಟ್ಟಿದ ವ್ಯಕ್ತಿ ಕೊಲೆಗೆ ಯತ್ನಿಸಿದ್ದಾನೆ.
ಕುಡುಗೋಲಿನಿಂದ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದ ವೇಳೆ ತಪ್ಪಿಸಿಕೊಳ್ಳಲು ಮಹಿಳೆ ಕೋರ್ಟ್ ಹಾಲ್‌ಗೆ ನುಗ್ಗಿದ್ದಾಳೆ. ಪ್ರಧಾನ ದಿವಾನಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಘಟನೆ ನಡೆದಿದ್ದು, ಕ್ಷಣಕಾಲ ಆತಂಕದ ವಾತಾವರಣ ಮನೆಮಾಡಿತ್ತು. ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿಯನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.

