ಗದಗ: ಪತ್ನಿಯೊಂದಿಗೆ ಜಗಳವಾಡಿ ಮೂರು ಮಕ್ಕಳೊಂದಿಗೆ ತಂದೆ ತುಂಗಭದ್ರಾ ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬ್ರಿಡ್ಜ್ ಬಳಿ ನಡೆದಿತ್ತು.
ಮೂರು ದಿನದ ಹಿಂದೆ ಸಾಯಂಕಾಲ ಈ ಹೃದಯ ವಿದ್ರಾಹಕ ಘಟನೆ ನಡೆದಿತ್ತು. ಮುಂಡರಗಿ ತಾಲೂಕಿನ ಮಕ್ತುಂಪುರ ಗ್ರಾಮದ 41 ವರ್ಷದ ತಂದೆ ಮಂಜುನಾಥ, ಮಕ್ಕಳಾದ 5 ವರ್ಷದ ಧನ್ಯಾ, 4 ವರ್ಷದ ಪವನಕುಮಾರ್ ಹಾಗೂ ಅಳಿಯನ ಮಗನಾದ 3 ವರ್ಷದ ವೇದಾಂತ ಎಂಬ ಮಗುವನ್ನು ನದಿಗೆ ಎಸೆದು ನಂತರ ಮಂಜುನಾಥ ತಾನೂ ಹಾರಿದ್ದ. ಈಗ 4 ಮೃತ ದೇಹಗಳು ಪತ್ತೆಯಾಗಿವೆ.
ನಿರಂತರ ಕಾರ್ಯಾಚರಣೆ ನಂತರ ನಿನ್ನೆ ಸಾಯಂಕಾಲ 3 ವರ್ಷದ ವೇದಾಂತ ಎಂಬ ಮಗುವಿನ ಶವ ಪತ್ತೆಯಾಗಿತ್ತು. ಇಂದು ಬೆಳಗಿನ ಜಾವ ಮಂಜುನಾಥ ಹಾಗೂ ಇನ್ನಿಬ್ಬರು ಮಕ್ಕಳಾದ ಧನ್ಯಾ, ಪವನಕುಮಾರ್ ಮೃತದೇಹ ಪತ್ತೆಯಾಗಿದೆ.
ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯ ಮೀನುಗಾರರಿಂದ ಕಾರ್ಯಾಚರಣೆ ನಡೆಸಿದ್ದರು. ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಮಕ್ತುಂಪುರ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ. ಏನು ಅರಿಯದ ಕಂದಮ್ಮಗಳನ್ನು ಕರೆದುಕೊಂಡು ನದಿಗೆ ಹಾರಿದ ಹೃದಯ ವಿದ್ರಾಹಕ ಘಟನೆಯಿಂದ ಮಕ್ತುಂಪುರ ಸೇರಿದಂತೆ ಸುತ್ತುಮುತ್ತಲಿನ ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ಶವಗಳ ಮರಣೋತ್ತರ ಪರೀಕ್ಷೆಗೆ ಮುಂಡರಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಗ್ರಾಮದ ಸ್ಮಶಾನದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಯಲಿದೆ.