ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಜಿಲ್ಲೆಯ ಕೆರೆ, ನದಿ, ಜಲಾಶಯ-ಜಲಪಾತಗಳೆಲ್ಲವೂ ಮೈದುಂಬಿ ಹರಿಯುತ್ತಿದ್ದು, ಹಲವೆಡೆ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಹರಿಯೋ ನೀರಿನಲ್ಲಿ ಸಾಹಸ ಮಾಡಲು ಹೋದ ಹಲವರ ವಾಹನಗಳು ನೀರುಪಾಲಾಗಿವೆ.
ಚಿಕ್ಕಬಳ್ಳಾಪುರದಲ್ಲಿಯೂ ಮಳೆರಾಯ ಆರ್ಭಟಕ್ಕೆ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಾತವಾರ ಹೊಸಹಳ್ಳಿ ಬಳಿ ರೈಲ್ವೆ ಅಂಡರ್ ಪಾಸ್ ಜಲಾವೃತವಾಗಿತ್ತು. ಟೊಮೋಟೋ ಲಾರಿ ಪಲ್ಟಿಯಾಗಿ, ಚಾಲಕನ ಎರಡೂ ಕಾಲು ಕಟ್ ಆಗಿದೆ. ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಚಾಲಕ ಶಿಫ್ಟ್ ಮಾಡಲಾಗಿದೆ. ಕೆಲಕಾಲ ವಾಹನ ಸಂಚಾರ ಬಂದ್, ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ 4 ದಿನ ಮಳೆ ಅಬ್ಬರ – ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಇತ್ತ ಮೇಳ್ಯಾ ಗ್ರಾಮದ ಕೆರೆ ಕೋಡಿ ಬಿದ್ದಿದ್ದು, ರಸ್ತೆ ಸಂಪೂರ್ಣ ಜಲಾವೃತವಾಗಿದೆ. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಸಾಹಸ ಮಾಡಲು ಹೋಗಿ ಟ್ರ್ಯಾಕ್ಟರ್, ಬೈಕ್ ಕೊಚ್ಚಿ ಹೋಗಿದೆ. ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ ಕ್ರೇನ್ ತರಿಸಿ ಗ್ರಾಮಸ್ಥರೆಲ್ಲಾ ಸೇರಿ ಟ್ರ್ಯಾಕ್ಟರ್ ಹಾಗೂ ಬೈಕ್ ಅನ್ನು ಮೇಲಕ್ಕೆತ್ತಿದ್ದಾರೆ. ಇನ್ನೊಂದು ಬೈಕ್ ನೀರಿನಲ್ಲಿ ಕೊಚ್ಚಿ ಹೋಗಿದ್ದು ಇನ್ನೂ ಪತ್ತೆಯಾಗಿಲ್ಲ. ಪ್ರತಿ ಬಾರಿಯೂ ಮಳೆ ಬಂದಾಗ ಇದೇ ಸಮಸ್ಯೆ ಆಗ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಕುಡಿಯುವ ನೀರಿನ ಮೂಲ ಜಕ್ಕಲಮಡುಗು ಜಲಾಶಯ ಸಹ ಮೈದುಂಬಿದ್ದು, ಜಲಾಶಯದ ಹಿನ್ನೀರಿನಲ್ಲಿ ಗುಂಗೀರ್ಲಹಳ್ಳಿ ಗ್ರಾಮದ ರಸ್ತೆ ಮುಳುಗಡೆಯಾಗಿದೆ. ಜಕ್ಕಲಮಡುಗು ಜಲಾಶಯದ ಹಿನ್ನೀರಿನ ರಸ್ತೆಯ ಬಳಿ ಓಡಾಡದಂತೆ ಪೊಲೀಸರು ಟೇಪ್ ಕಟ್ಟಿದ್ರು ಜನರು ಕಿತ್ತು ಹಾಕಿ ಸಂಚರಿಸುತ್ತಿದ್ದಾರೆ.