DistrictsHassanKarnatakaLatestMain Post

ಬೈಕ್ ಮೇಲೆ ಬಿದ್ದ ಬೃಹತ್ ಗಾತ್ರದ ಮರ- ನರಳಾಡಿ ಪ್ರಾಣಬಿಟ್ಟ ಸವಾರ

ಹಾಸನ: ಜಿಲ್ಲೆಯಲ್ಲಿ ಭಾರೀ ಗಾಳಿ, ಮಳೆಯಿಂದಾಗಿ ಬೈಕ್ ಸವಾರನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದು, ನರಳಾಡಿ ಪ್ರಾಣ ಬಿಟ್ಟ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ರಸ್ತೆಯ ಮಾಳೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಕಲ್ಲೇಸೋಮನಹಳ್ಳಿ ಗ್ರಾಮದ ರಂಗಶೆಟ್ಟಿ (40) ಮೃತ ದುರ್ದೈವಿ. ಚನ್ನರಾಯಪಟ್ಟಣದಿಂದ ಬೈಕ್‍ನಲ್ಲಿ ಕಲ್ಲೇಸೋಮನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಬೃಹತ್ ಗಾತ್ರದ ಮರವೊಂದು ರಂಗಶೆಟ್ಟಿ ಮೇಲೆ ಬಿದ್ದಿದೆ. ಬೈಕ್ ಹಾಗೂ ಮರದ ನಡುವೆ ಸಿಲುಕಿದ ರಂಗಶೆಟ್ಟಿ ಅರ್ಧಗಂಟೆಗೂ ಹೆಚ್ಚು ಹೊತ್ತು ನರಳಾಡಿ ರಕ್ಷಿಸುವಂತೆ ಅಂಗಲಾಚಿದ್ದಾರೆ.

ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿದ್ದು, ರಂಗಶೆಟ್ಟಿಯನ್ನು ರಕ್ಷಿಸಲು ಮಾತ್ರ ಸಾಧ್ಯವಾಗಿಲ್ಲ. ಸ್ಥಳಕ್ಕೆ ಆಸ್ಪತ್ರೆಯ ಸಿಬ್ಬಂದಿ ಬಂದು ಪ್ರಥಮ ಚಿಕಿತ್ಸೆ ನೀಡಿದ್ದಾದರೂ ಜೀವಂತವಾಗಿ ಉಳಿಸಲು ಸಾಧ್ಯವಾಗಲಿಲ್ಲ. ರಂಗಶೆಟ್ಟಿ ನರಳಾಡುತ್ತಿದ್ದ, ದೃಶ್ಯ ಕಂಡು ಸ್ಥಳದಲ್ಲಿದ್ದವರು ಮರುಗಿದರು.

ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ 2 ಜೆಸಿಬಿ, ಹಿಟಾಚಿ ಯಂತ್ರ ಬಳಸಿ ರಂಗಶೆಟ್ಟಿ ಮೃತದೇಹವನ್ನು ಹೊರತೆಗೆದರು. ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮರದ ಕೆಳಗೆ ಸಿಲುಕಿ ಬೈಕ್ ಸವಾರ ಸಾವನ್ನಪ್ಪಲು ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಕೆಲಕಾಲ ರಸ್ತೆ ತಡೆದು, ರಸ್ತೆಯಿಂದ ಮರ ತೆರವುಗೊಳಿಸಲು ಬಿಡದೆ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ರಂಗೋಲಿ ಹಾಕುತ್ತಿದ್ದ ಮಹಿಳೆ ಸರ ಕಿತ್ತೊಯ್ದ ಕಳ್ಳ

ಹಳೆಯದಾದ ಮರವನ್ನು ತೆರವುಗೊಳಿಸುವಂತೆ ಕೆಲ ದಿನಗಳ ಹಿಂದೆ ಅರಣ್ಯ ಇಲಾಖೆಗೆ ಗ್ರಾಪಂ ವತಿಯಿಂದ ಮನವಿ ಸಲ್ಲಿಸಿದ್ದರೂ, ಇದುವರೆಗೂ ತೆರವುಗೊಳಿಸಿಲ್ಲ. ಪ್ರತಿನಿತ್ಯ ಬಸ್ ಸೇರಿದಂತೆ ಇತರೆ ವಾಹನಗಳನ್ನು ಹತ್ತಲು ಇದೇ ಮರದ ಕೆಳಗೆ ವಿದ್ಯಾರ್ಥಿಗಳು ಸೇರಿ ನೂರಾರು ಮಂದಿ ನಿಲ್ಲುತ್ತಾರೆ. ಇಂದು ಭಾನುವಾರವಾಗಿದ್ದರಿಂದ ಮಕ್ಕಳು ಶಾಲಾ-ಕಾಲೇಜಿಗೆ ಹೋಗಿಲ್ಲ. ಈ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರು ಆಗಮಿಸುವಂತೆ ಗ್ರಾಮಸ್ಥರು ಪಟ್ಟುಹಿಡಿದರು. ಇದನ್ನೂ ಓದಿ: ಕೆಂಪು, ಬಿಳಿ, ಹಸಿರು ಎಂದು ಬಾವುಟದ ಬಣ್ಣ ತಪ್ಪಾಗಿ ಹೇಳಿದ ಸಿದ್ದರಾಮಯ್ಯ

Live Tv

Leave a Reply

Your email address will not be published.

Back to top button