ಹಾಸನ: ಮನುಷ್ಯರು ಸತ್ತರೆ ಅವರ ಪುಣ್ಯತಿಥಿ ಕಾರ್ಯ ಹಾಗಿರಲಿ, ಅಂತ್ಯ ಸಂಸ್ಕಾರವನ್ನೂ ವಿಧಿ ಬದ್ಧವಾಗಿ ಮಾಡದ ಎಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಆದರೆ ಹಾಸನ ಜಿಲ್ಲೆ ಹೊಳೆನರಸೀಪುರದ ಹೂವಿನ ವ್ಯಾಪಾರಿಗಳು ಮನೆ ಮಗನಿಗಿಂತ ಹೆಚ್ಚಾಗಿ ತಮ್ಮ ಬಗ್ಗೆ ನಿಷ್ಟೆ ತೋರಿದ ನಾಯಿ ಬಗ್ಗೆ ವಿಶಿಷ್ಟ ಪ್ರೀತಿ ತೋರಿದ್ದಾರೆ.
ಪ್ರೀತಿಯ ನಾಯಿ ಧರ್ಮ ಸತ್ತ ನಂತರ 11ನೇ ದಿನದ ತಿಥಿ ಕಾರ್ಯವನ್ನು ಅರ್ಥಪೂರ್ಣವಾಗಿ ನೆರವೇರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ನಾಯಿಯ ಪುಣ್ಯತಿಥಿಯ ಬಾಡೂಟದಲ್ಲಿ ನೂರಾರು ಮಂದಿ ಭಾಗಿಯಾಗುವ ಮೂಲಕ ನಿಯತ್ತಿನ ಪ್ರಾಣಿಯೇ ನಿನಗೊಂದು ಸಲಾಂ, ಮತ್ತೆ ಹುಟ್ಟಿಬಾ ಎಂದು ಸ್ಮರಿಸಿಕೊಂಡರು.
Advertisement
Advertisement
ಹೌದು. ಈ ನಾಯಿಯ ಹೆಸರು ಧರ್ಮ. ಧರ್ಮವಾಗಿ ಎಲ್ಲರೊಂದಿಗೆ ನಡೆದುಕೊಳ್ಳುತಿದ್ದ ಶ್ವಾನದ ಹೆಸರು ‘ಧರ್ಮ’. ಕಳೆದ 8 ವರ್ಷಗಳಿಂದ ಹೊಳೆನರಸೀಪುರದ ಹೂವಿನ ಮಾರುಕಟ್ಟೆಯಲ್ಲಿ ಈತನದ್ದೇ ದರ್ಬಾರ್ ನಡೆಯುತಿತ್ತು. ಧರ್ಮನ ಹುಟ್ಟು ಎಲ್ಲೋ? ಹಿನ್ನೆಲೆ ಎಲ್ಲೋ?. ಆದರೆ ನೂರಾರು ಮಂದಿ ಹೂವಿನ ವ್ಯಾಪಾರಿಗಳಿಗೆ ಪ್ರೀತಿ ಪಾತ್ರವಾಗಿತ್ತು ಈ ನಿಯತ್ತಿನ ಪ್ರಾಣಿ.
Advertisement
ಪ್ರತಿಯೊಬ್ಬ ಹೂ ವ್ಯಾಪಾರಿ ಇವರೇ ಎಂದು ಗುರುತಿಸುತ್ತಿದ್ದ ಧರ್ಮ, ಯಾರೊಂದಿಗೂ ದುವರ್ತನೆ ತೋರಿದವನಲ್ಲ. ಕೊಟ್ಟ ಆಹಾರವನ್ನು ತಿಂದು ಒಂದು ರೀತಿಯಲ್ಲಿ ಇಡೀ ಮಾರುಕಟ್ಟೆಗೆ ಕಣ್ಗಾವಲಾಗಿದ್ದ. ಒಳ್ಳೆತನದಿಂದಲೇ ನಾಯಿಗೆ ಧರ್ಮ ಎಂದು ಹೆಸರಿಡಲಾಗಿತ್ತು.
Advertisement
ಹೀಗಿದ್ದ ಧರ್ಮ ಕಳೆದ ಅಕ್ಟೋಬರ್ 14 ರಂದು ಅನಾರೋಗ್ಯದಿಂದ ಸಾವನ್ನಪ್ಪಿದ. ಅಂದು ಹೂವಿನ ಮಾರುಕಟ್ಟೆಯಲ್ಲಿ ನೀರವ ಮೌನ ಮನೆ ಮಾಡಿತ್ತು. ನೂರಾರು ಮಂದಿ ಅಗಲಿದ ಧರ್ಮನಿಗೆ ಕಂಬನಿ ಮಿಡಿದಿದ್ದರು. ಧರ್ಮನ ಸಾವಿನಿಂದ ಹೊರ ಬರದ ಜನರು, ಇಂದು 11ನೇ ದಿನ ಪುಣ್ಯತಿಥಿ ಕಾರ್ಯವನ್ನು ಅರ್ಥಪೂರ್ಣವಾಗಿ ನೆರವೇರಿಸುವ ಮೂಲಕ ಮಾನವೀಯತೆ ತೋರಿಸಿದ್ದಾರೆ. ಮರಿ ಊಟ, ಬೋಟಿ, ಅನ್ನ, ಸೌತೇಕಾಯಿ ಹೀಗೆ ಮನುಷ್ಯರ ತಿಥಿಯನ್ನು ಹೇಗೆ ಮಾಡುತ್ತಾರೋ ಹಾಗೆಯೇ ನಾಯಿಗೂ ಬೊಂಬಾಟ್ ಬಾಡೂಟ ಮಾಡಿದ್ದು ವಿಶೇಷವಾಗಿತ್ತು.
ಧರ್ಮ ಸ್ಥಳೀಯರೊಂದಿಗೆ ಯಾವ ಅನೋನ್ಯವಾಗಿದ್ದ ಎಂದರೆ ವರ್ತಕರು ತಮ್ಮ ಅಂಗಡಿ ಬಳಿ ಇಲ್ಲದೇ ಹೋದರೂ ಹಗಲು-ರಾತ್ರಿ ಧರ್ಮನೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದ. ಧರ್ಮ ಇದ್ದ ಎಂದರೆ ಅಲ್ಲಿ ಯಾವುದೇ ಕಳ್ಳತನ ಇತ್ಯಾದಿ ಯಾವುದೇ ಕೃತ್ಯಗಳಿಗೆ ಅವಕಾಶ ಇರಲಿಲ್ಲ. ಇದೇ ಕಾರಣಕ್ಕೆ ನಾಯಿ ಸಮಾಧಿಗೆ ಹಾಲು ತುಪ್ಪ ಎರೆದು ಪೂಜೆ ಸಲ್ಲಿಸಿದರು.
ಧರ್ಮನಿಗೆ ಇಷ್ಟವಾಗಿದ್ದ ಸಿಹಿ ಹಾಗೂ ಖಾರ ತಿಂಡಿಯನ್ನೂ ಸಿದ್ಧಪಡಿಸಲಾಗಿತ್ತು. ಇದಕ್ಕಾಗಿ ಸ್ಥಳೀಯರೇ ಹಣ ಹೊಂದಿಸಿ ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದರು. ಈ ಕಾರ್ಯಕ್ಕೆ ಮಾರುಕಟ್ಟೆಯ ಪ್ರತಿಯೊಬ್ಬರೂ ಕೈ ಜೋಡಿಸಿದ್ದು ವಿಶೇಷವಾಗಿತ್ತು.
ಬದುಕಿದ್ದಾಗ ಧರ್ಮ ಮಾಡುತ್ತಿದ್ದ ಒಳ್ಳೇ ಕೆಲಸ ಒಂದಲ್ಲ ಎರಡಲ್ಲ. ಅಕಸ್ಮಾತ್ ಯಾರಿಗಾದರೂ ತನಗೆ ಪರಿಚಿತರ ಮನೆ ವಿಳಾಸ ಗೊತ್ತಿಲ್ಲದೇ ಹೋದರೆ ತಾನೆ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದನಂತೆ. ಪರಿಚಿತರು ಬಸ್ ಗೆ ಹೋದರೆ ಅವರನ್ನು ಕಳಿಸಿ, ನೇರವಾಗಿ ಮಾರುಕಟ್ಟೆಗೆ ಬಂದು ಬಿಡುತ್ತಿದ್ದ. 8 ವರ್ಷಗಳ ಅವಧಿಯಲ್ಲಿ ಯಾರಿಗೂ ಕಚ್ಚಿಲ್ಲ. ಯಾರಿಂದಲೂ ಕೆಟ್ಟವನು ಎನಿಸಿಕೊಂಡಿಲ್ಲ.
ಹೀಗಾಗಿಯೇ ಅಗಲಿದ ಧರ್ಮನಿಗೆ ಗೌರವಯುತವಾಗಿ ತಿಥಿ ಕಾರ್ಯ ಮಾಡಿ ಮಾದರಿ ಮೆರೆದಿದ್ದಾರೆ. ಧರ್ಮನ ಮೇಲಿನ ಪ್ರೀತಿಗೆ ಇಷ್ಟಕ್ಕೇ ನಿಂತಿಲ್ಲ. ಜನವರಿಯಲ್ಲಿ ಧರ್ಮನ ಸಮಾಧಿ ಸ್ಥಳದಲ್ಲಿ ಸ್ಮಾರಕ ಮಾಡಲೂ ನಿರ್ಧಾರ ಮಾಡಿದ್ದಾರೆ. ಒಟ್ಟಿನಲ್ಲಿ ಮನುಷ್ಯ-ಮನುಷ್ಯ ನಡುವೆ ಮೂಗು ಮುರಿಯುವ ಮಂದಿ ಇರುವ ಈ ಕಾಲದಲ್ಲಿ ಮೂಕ ಪ್ರಾಣಿಯ ಅಂತ್ಯ ಸಂಸ್ಕಾರದ ಜೊತೆಗೆ ಅದರ ಪುಣ್ಯತಿಥಿಯನ್ನೂ ಮಾಡಿದ್ದು ನಿಜಕ್ಕೂ ವಿಶೇಷವೇ ಸರಿ.