ಪುನೀತ್ ರಾಜ್ ಕುಮಾರ್ (Puneeth Rajkumar) ನಟನೆಯ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ‘ಪುನೀತ ಪರ್ವ’ (Puneeth Parva) ಕಾರ್ಯಕ್ರಮವನ್ನು ವೀಕ್ಷಿಸುತ್ತಾ ಕಣ್ಣೀರಿಟ್ಟಿದ್ದ ಬೆಂಗಳೂರಿನ ಅಪ್ಪು ಅಭಿಮಾನಿ (Fan) ಗಿರಿರಾಜ್ (Giriraj) ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ೨೯ ವರ್ಷದ ಗಿರಿರಾಜ್ ಖಾಸಗಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ನೆನ್ನೆ ಪುನೀತ ಪರ್ವ ಕಾರ್ಯಕ್ರಮಕ್ಕೆ ಹೋಗಲು ಆಗದೇ ಮನೆಯಲ್ಲೆ ಕುಟುಂಬದ ಜೊತೆ ಟಿವಿಯಲ್ಲಿ ವೀಕ್ಷಣೆ ಮಾಡಿದ್ದ ಗಿರಿರಾಜ್, ಎರಡ್ಮೂರು ಬಾರಿ ಪುನೀತ್ ರಾಜಕುಮಾರ್ ಭೇಟಿ ಕೂಡ ಮಾಡಿದ್ದರು.
ಈ ಕುರಿತು ಮಾತನಾಡಿರುವ ಗಿರಿರಾಜ್ ತಂದೆ, ‘ನನ್ನ ಮಗನಿಗೆ ಅಪ್ಪು ಅಂದರೆ ಪಂಚಪ್ರಾಣ. ಅಪ್ಪು ಜೀವಂತವಾಗಿದ್ದಾಗ ಭೇಟಿ ಮಾಡಿ ಕಾಫಿ ಕುಡಿದು ಬಂದಿದ್ದ. ನಿನ್ನೆ ಕಾರ್ಯಕ್ರಮ ನೋಡ್ತಾ ನೋಡ್ತಾ ಬಿಕ್ಕಿಬಿಕ್ಕಿ ಅಳೋಕೆ ಶುರು ಮಾಡಿದ. ರಾತ್ರಿ ಕಾರ್ಯಕ್ರಮ ನೋಡುತ್ತ ತುಂಬಾ ಕಣ್ಣಿರುಹಾಕಿದ್ದ. ಹುಟ್ಟಿದರೆ ಅಪ್ಪು ತರ ಇರಬೇಕು. ಬದುಕಿದರೆ ಅಪ್ಪು ತರಹ ಬದುಕಬೇಕು ಅಂತ ಸಾಕಷ್ಟು ಕಣ್ಣಿರು ಹಾಕಿದ್ದ. ಸಮಾಧಾನ ಮಾಡ್ಕೊ ಅಂತ ತುಂಬಾ ಹೇಳಿದ್ವಿ. ರಾತ್ರಿ ಶೌಚಾಲಯಕ್ಕೆ ಹೋಗಿದ್ದಾಗ ಕುಸಿದ ಬಿದ್ದ. ಸಮೀಪದ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಜೀವ ಹೋಗಿತ್ತು ( Death) ಇಬ್ಬರು ಹೆಣ್ಣು ಮಕ್ಕಳು, ಮಗನೊಬ್ಬನೇ ಇದ್ದ ಅವನನ್ನು ಕಳ್ಕೊಂಡಿದ್ದೇವೆ’ ಎಂದಿದ್ದಾರೆ. ಇದನ್ನೂ ಓದಿ:ಪುನೀತ ಪರ್ವ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಗೈರು ಹಾಜರಿ : ಕ್ಷಮಿಸಿ ಅಪ್ಪು ಸರ್
ಪುನೀತ್ ನಿಧರಾದಾಗಲೂ ಅನೇಕ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡರು, ಹೃದಯಾಘಾತದಿಂದಲೂ ನಿಧನರಾಗಿದ್ದರು. ಈ ಸಮಯದಲ್ಲಿ ಡಾ.ರಾಜ್ ಕುಟುಂಬ ಅಭಿಮಾನಿಗಳಿಗೆ ಮನವಿ ಮಾಡಿ, ‘ದಯವಿಟ್ಟು ಯಾರೂ ದುಡುಕಿನ ನಿರ್ಧಾರ ತಗೆದುಕೊಳ್ಳಬೇಡಿ. ಅಪ್ಪುಗೆ ಇದು ಇಷ್ಟವಾಗಲ್ಲ. ನಿಮ್ಮ ಕುಟುಂಬವನ್ನು ನೀವು ಚೆನ್ನಾಗಿ ನೋಡಿಕೊಳ್ಳಿ. ಅದು ಅಪ್ಪುಗೆ ಇಷ್ಟವಾಗುತ್ತದೆ. ದಯವಿಟ್ಟು ಯಾರೂ ಸಾಯಬೇಡಿ’ ಎಂದೂ ಮನವಿ ಮಾಡಿದ್ದರು.