ಹಾಸನ: ಸಾವಿನ ದವಡೆಯಿಂದ ಪಾರಾಗಲು ಕಾಡಿನಿಂದ ನಾಡಿನತ್ತ ಓಡಿ ಬಂದ ಜಿಂಕೆ, ಬೀದಿ ನಾಯಿ ಪಾಲಾಗುವುದನ್ನು ಗ್ರಾಮಸ್ಥರು ತಪ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ಹಾಸನ ಜಿಲ್ಲೆ ಅಡಿಬೈಲು ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು 7 ವರ್ಷದ ಗಂಡು ಜಿಂಕೆ ಮನುಷ್ಯರ ಸಮಯ ಪ್ರಜ್ಞೆಯಿಂದ ಪಾರಾಗಿದೆ. ತೀವ್ರ ಆಘಾತಕ್ಕೆ ಒಳಗಾಗಿದ್ದ ಜಿಂಕೆಯನ್ನು ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ಕೆಲ ಹೊತ್ತು ಸಂತೈಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಟ್ಟಿದ್ದಾರೆ.
ಸೋಮವಾರ ಬೆಳಗ್ಗೆ 7.30ರ ವೇಳೆಗೆ ಆಲೂರು ತಾಲೂಕಿನ ಅಡಿಬೈಲು ಗ್ರಾಮದ ಅರಣ್ಯದಿಂದ ಈ ಜಿಂಕೆ ಓಡೋಡಿ ಬಂದಿತ್ತು. ಮತ್ತೊಂದು ಕಾಡು ಪ್ರಾಣಿಯಿಂದ ತಪ್ಪಿಸಿಕೊಳ್ಳುವ ಭಯದಿಂದಲೋ ಅಥವಾ ಬೇರೆ ಕಾರಣದಿಂದ ಕಾಡಿನಿಂದ ಬರುವಾಗಲೇ ಜಿಂಕೆಯ ಕೊಂಬು ಮುರಿದಿತ್ತು. ದೇಹದ ಕೆಲ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದವು.
ಇದೇ ಕಾರಣಕ್ಕೆ ಗಾಬರಿಗೊಂಡಿದ್ದ ಜಿಂಕೆ ಬದುಕಿದ್ರೆ ಸಾಕಪ್ಪ ಎಂದು ನಾಡಿನತ್ತ ಮುಖ ಮಾಡಿತ್ತು. ಆದರೆ ಬೆಂಕಿಯಿಂದ ಬಾಣಲೆಗೆ ಅನ್ನೋ ಹಾಗೆ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದ ಜಿಂಕೆಯನ್ನು ತಿಂದು ಮುಗಿಸಲು ಮೂರ್ನಾಲ್ಕು ಬೀದಿ ನಾಯಿಗಳು ಬೆನ್ನಟ್ಟಿದ್ದವು.
ಅದೇ ವೇಳೆಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ಹಾಗೂ ಸ್ಥಳೀಯರು ಭಯದಲ್ಲೇ ಓಡಾಡುತ್ತಿದ್ದ ಜಿಂಕೆಯನ್ನು ಹೇಗೋ ಹಿಡಿದು ನೀರು ಕುಡಿಸಿ ಕೆಲ ಹೊತ್ತು ಸಂತೈಸಿದರು. ನಂತರ ಅರಣ್ಯ ಇಲಾಖೆಯವರಿಗೂ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು.
ಮೊದಲೇ ಆಲೂರು ತಾಲೂಕು ದೊಡ್ಡಬೆಟ್ಟ ಸುತ್ತಮುತ್ತಲ ಜನರು ಕಾಡಾನೆ ಭಯದಲ್ಲೇ ಬದುಕುತ್ತಿದ್ದಾರೆ. ಅದೇ ಭೀತಿಯಲ್ಲಿದ್ದ ಜನರಿಗೆ ಮೃದು ಸ್ವಭಾವದ ಪ್ರಾಣಿ ಜಿಂಕೆ ಕಾಣಿಸಿಕೊಂಡಿದ್ದು, ಒಂದು ರೀತಿಯ ಅಚ್ಚರಿ ಎನಿಸಿತು. ಮೊದಲೇ ಗಾಬರಿಯಲ್ಲಿದ್ದ ಜಿಂಕೆಗೆ ನೀರು ಕುಡಿಸಿ ಸಮಾಧಾನ ಮಾಡಿದ ಜನರು ಮರು ಜೀವ ಕೊಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಎಫ್‍ಓ ಮಂಜುನಾಥ್, ಅಡಿಬೈಲು ಅರಣ್ಯದಿಂದ ತಪ್ಪಿಸಿಕೊಂಡು ಜಿಂಕೆಯೊಂದು ನಾಡಿಗೆ ಬಂದಿತ್ತು. ಅಪಾಯದಲ್ಲಿದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ನಂತರ ಅರಣ್ಯಾಧಿಕಾರಿಗಳು ಗಾಯಗೊಂಡಿದ್ದ ಜಿಂಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ದೊಡ್ಡ ಬೆಟ್ಟ ಅರಣ್ಯಕ್ಕೆ ಬಿಡಲಾಗಿದೆ ಎಂದರು.