ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ಆರೋಪಿಯಿಂದ ಇರಿತಕ್ಕೆ ಒಳಗಾದ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಂಬೇಡ್ಕರ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ತುಮಕೂರು ಮೂಲದ ತೇಜ ರಾಜ ಶರ್ಮಾ ಎಂಬಾತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದಿದ್ದ. ಕೂಡಲೇ ವಿಶ್ವನಾಥ್ ಶೆಟ್ಟಿ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
Advertisement
ಘಟನೆ ಹೇಗಾಯ್ತು?
ತುಮಕೂರಿನ ಎಸ್‍ಎಸ್‍ಪುರಂ ನಿವಾಸಿಯಾಗಿರುವ ತೇಜ ರಾಜ ಶರ್ಮಾ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ವಾಸಂತಿ ಉಪ್ಪಾರ ಹಾಗೂ ಬಾಲಮಂದಿರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರು ಕೊಟ್ಟಿದ್ದನು. ಅಲ್ಲದೇ ಬಾಲಮಂದಿರದಲ್ಲಿ ಬಟ್ಟೆ ಖರೀದಿಯಲ್ಲಿ ಅವ್ಯವಹಾರ ಸೇರಿದಂತೆ ಹಲವು ಹಗರಣ ವಿರುದ್ಧ ದೂರು ನೀಡಿದ್ದನು. ಅರ್ಜಿ ಲೋಕಾಯುಕ್ತದಲ್ಲಿ ವಜಾಗೊಂಡಿತ್ತು. ಈ ಅರ್ಜಿಯ ಬಗ್ಗೆ ಇಂದು ಮಧ್ಯಾಹ್ನ 12.45ಕ್ಕೆ ಆರೋಪಿ ಲೋಕಾಯುಕ್ತ ಕಚೇರಿಗೆ ಬಂದು ರಿಜಿಸ್ಟ್ರಾರ್ ನಲ್ಲಿ ಸಹಿ ಹಾಕಿ ಲೋಕಾಯುಕ್ತರನ್ನು ಭೇಟಿ ಮಾಡಬೇಕು ಎಂದು ಹೇಳಿದ್ದಾನೆ. ಮಧ್ಯಾಹ್ನ 1.30ರ ವೇಳೆಗೆ ಲೋಕಾಯುಕ್ತರ ಭೇಟಿಗೆ ಅನುಮತಿ ಸಿಕ್ಕಿದೆ.
Advertisement
Advertisement
ಕೊಠಡಿಯ ಹೊರಗಡೆ ಇದ್ದ ಪೊಲೀಸರು ತೇಜ ರಾಜ ಶರ್ಮಾನನ್ನು ಒಳಗಡೆ ಬಿಟ್ಟಿದ್ದಾರೆ. ಒಳಗಡೆ ಬಿಟ್ಟ ನಂತರ ಲೋಕಾಯುಕ್ತರು ಮತ್ತು ತೇಜ ರಾಜನ ನಡುವೆ ಏನು ಮಾತುಕತೆ ನಡೆದಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಮಧ್ಯಾಹ್ನ 1.45ರ ವೇಳೆಗೆ ಲೋಕಾಯಕ್ತರಿಗೆ ಆರೋಪಿ ಮೂರು ಬಾರಿ ಚಾಕು ಇರಿದಿದ್ದಾನೆ.
ಕಿಬ್ಬೊಟ್ಟೆಗೆ 3 ಬಾರಿ ಚಾಕುವಿನಿಂದ ಇರಿದ ಪರಿಣಾಮ ಚಾಕುವೇ ಮುರಿದಿದೆ. ಘಟನೆಯಿಂದಾಗಿ ಲೋಕಾಯುಕ್ತರು ಸ್ಥಳದಲ್ಲೇ ಕುಸಿದು, ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಕೂಡಲೇ ವಿಧಾನ ಸೌಧ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ನ್ಯಾಯಮೂರ್ತಿಗಳನ್ನು ಕೂಡಲೇ ಮಲ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇತ್ತ ಚಾಕುವಿನಿಂದ ಇರಿದ ಆರೋಪಿ ತೇಜರಾಜ ಶರ್ಮಾನನ್ನು ವಿಧಾನಸೌಧ ಠಾಣೆಯ ಪೊಲೀಸರು ಕೂಡಲೇ ಬಂಧಿಸಿದ್ದಾರೆ.
ಲೋಕಾಯುಕ್ತ ಕಚೇರಿಯಲ್ಲಿ ಭದ್ರತಾ ಲೋಪವಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಯಾವುದೇ ಒಂದು ಕಚೇರಿಯೊಳಗೆ ವ್ಯಕ್ತಿ ಪ್ರವೇಶ ಮಾಡುವುದಕ್ಕೂ ಮುಂಚೆ ತಪಾಸಣೆ ಮಾಡಲಾಗುತ್ತದೆ. ಅದರಲ್ಲೂ ಸರ್ಕಾರಿ ಕಚೇರಿ ಪ್ರವೇಶಕ್ಕೂ ಮುನ್ನ ಪ್ರವೇಶದ್ವಾರದಲ್ಲಿ ಮೆಟನ್ ಸ್ಕ್ಯಾನರ್ ಅಳವಡಿಸಲಾಗುತ್ತದೆ. ಆದರೆ ಇಲ್ಲಿ ಇರುವ ತಪಸಣಾ ಯಂತ್ರ ಕೆಟ್ಟೊಗಿದ್ದು, ಅದನ್ನು ಸರಿಪಡಿಸುವ ಯತ್ನವಾಗಿಲ್ಲ. ಹೀಗಾಗಿ ಆರೋಪಿ ಈ ಕೃತ್ಯ ಎಸಗಲು ಸಾಧ್ಯವಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ತುಮಕೂರು ಎಂ.ಜಿ ರಸ್ತೆಯ ನಿವಾಸಿ ತೇಜ್ ರಾಜ್ ಶರ್ಮಾ ಕರುನಾಡು ಸೇನೆಯ ಸದಸ್ಯನಾಗಿದ್ದ ಎನ್ನುವ ವಿವರ ಈಗ ಲಭ್ಯವಾಗಿದೆ.
ಲೋಕಾಯುಕ್ತರ ಜೊತೆ ಒಟ್ಟು 5 ನಿಮಿಷ ಮಾತುಕತೆ ನಡೆದಿದ್ದು, ಈ ವೇಳೆ ತಾನು ಕೊಟ್ಟ ದೂರಗಳು ಬಗ್ಗೆ ಮಾತನಾಡಿದ್ದಾನೆ. ಸಾಕಷ್ಟು ಸಾಕ್ಷಿ ಒದಗಿಸಿದ್ದರೂ ದೂರನ್ನು ವಜಾ ಮಾಡಿದ್ದು ಯಾಕೆ ಎಂದು ಪ್ರಶ್ನೆ ಕೇಳಿದ್ದಾನೆ. ಎಲ್ಲ ಪ್ರಶ್ನೆಗಳಿಗೆ ವಿಶ್ವನಾಥ್ ಶೆಟ್ಟಿ ಅವರು ನಗುತ್ತಾ ಉತ್ತರ ನೀಡಿದ್ದಾರೆ. ಎಷ್ಟೇ ದೂರು ಕೊಟ್ಟರೂ ಭ್ರಷ್ಟರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸಿಟ್ಟಾಗಿ ಚಾಕು ಇರಿದಿದ್ದಾನೆ ಎಂದು ಲೋಕಾಯುಕ್ತ ಕಚೇರಿ ಸಿಬ್ಬಂದಿಯೊಬ್ಬರು ಹೇಳಿಕೆ ನೀಡಿದ್ದಾರೆ.