ರೇವ್ ಪಾರ್ಟಿ ಪ್ರಕರಣ: ಹೇಮಾಗೆ ಮತ್ತೆ ನ್ಯಾಯಾಂಗ ಬಂಧನ

Public TV
2 Min Read
ACTRESS HEMA

ರೇವ್ ಪಾರ್ಟಿಯಲ್ಲಿ (Rave Party) ಡ್ರಗ್ಸ್ (Drugs) ಸೇವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾಗೆ (Hema) ಮತ್ತೆ ನ್ಯಾಯಾಂಗ ಬಂಧನ ಮುಂದುವರೆದಿದೆ. ನಿನ್ನೆಯಷ್ಟೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸಿಸಿಬಿ ಹೇಮಾರನ್ನು ತಮ್ಮ ವಶಕ್ಕೆ ಕೇಳಿತ್ತು. ಆನೇಕಲ್‌ನ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು ಹೇಮಾರನ್ನು 24 ಗಂಟೆಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿತ್ತು. ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಮತ್ತೆ ಇಂದು ನಟಿಯನ್ನು ಕೋರ್ಟ್‌ಗೆ ಕರೆತರಲಾಗಿತ್ತು. ಈ ಹಿಂದೆ ನ್ಯಾಯಾಲಯವು ಹೇಮಾಗೆ ಜೂನ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಈಗ ಅದನ್ನು ಮತ್ತೆ ಮುಂದುವರೆಸಿದೆ. ಇದನ್ನೂ ಓದಿ:ರೇವ್ ಪಾರ್ಟಿ ಪ್ರಕರಣ: ತೆಲುಗು ಕಲಾವಿದರ ಸಂಘದಿಂದ ಹೇಮಾ ಅಮಾನತಿಗೆ ಚರ್ಚೆ

hema

ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ಹೇಮಾ ರಿಪೋರ್ಟ್ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಸಿಸಿಬಿ ನಟಿಗೆ ಎರಡು ಬಾರಿ ನೋಟಿಸ್ ನೀಡಿತ್ತು. ಎರಡಕ್ಕೂ ಪ್ರತಿಕ್ರಿಯಿಸದೇ ಇದ್ದಾಗ ವಿಚಾರಣೆಗಾಗಿ ಬಂದಿದ್ದ ನಟಿಯನ್ನು ಬಂಧಿಸಿ, ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಜೂನ್ 5ರಂದು ವಾದ ಪ್ರತಿವಾದವನ್ನು ಆಲಿಸಿದ್ದ ಕೋರ್ಟ್ ಹೇಮಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ನಿನ್ನೆ ನಡೆದ ವಿಚಾರಣೆ ಹೇಗಿತ್ತು?

ನಿನ್ನೆ ಹೆಚ್ಚಿನ ವಿಚಾರಣೆಗಾಗಿ ಹೇಮಾರನ್ನು ಸಿಸಿಬಿ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಸಿಸಿಬಿ ಪರ ವಕೀಲರು ಮನವಿ ಮಾಡಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ವಾದಕ್ಕೆ ಹೇಮಾ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು. ಸಂತೋಷ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಬ್ಲಡ್ ಟೆಸ್ಟ್ ಮಾಡಲಾಗಿದೆ. ನ್ಯಾಯಾಲಯ ಖಾಸಗಿ ಆಸ್ಪತ್ರೆ ವರದಿಗೆ ಮನ್ನಣೆ ನೀಡಬಾರದು. ಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ. ಹಾಗಾಗಿ ಸಿಸಿಬಿ ಕಸ್ಟಡಿಗೆ ನೀಡಬಾರದು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು ಹೇಮಾ ಪರ ವಕೀಲರು. ವಾದ ಪ್ರತಿವಾದ ಅಲಿಸಿದ ನ್ಯಾಯಾಧೀಶರು ಮಧ್ಯಾಹ್ನ ಮೂರು ಗಂಟೆಗೆ ಆದೇಶ ಕಾಯ್ದಿರಿಸಿದ್ದರು.

ಮೂರು ಗಂಟೆಯ ನಂತರ ಆನೇಕಲ್ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎ.ಎಸ್ ಸಲ್ಮಾ ಅವರು 24 ಗಂಟೆಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಎಂದು ಆದೇಶ ಹೊರಡಿಸಿದರು. ಸಿಸಿಬಿ ವಶಕ್ಕೆ ಪಡೆದ ನಂತರ ಕೋರ್ಟ್‌ನಿಂದ ಹೊರಬಂದ ವೇಳೆ ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದರು ಹೇಮಾ ಮತ್ತು ಆಕೆಯ ವಕೀಲ ಪಟಾಪಟ್ ಪ್ರಕಾಶ್. ಬಳಿಕ ವಿಶೇಷ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಹಾಕಲಾಗುವುದು ಎಂದು ತಿಳಿಸಿದ್ದರು.

Share This Article