ಬೆಂಗಳೂರು: ನಗರದ ಹೆರಿಟೇಜ್ ಹಾಲು ಉತ್ಪನ್ನಗಳ ಕಂಪನಿಯ ಆಡಿಟರ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆ ದಿನದ ಕೆಲಸಗಳನ್ನು ಅಂದೇ ಮುಗಿಸಿ, ಬಾಕಿ ಇಡಬೇಡಿ ಎಂದು ಸದಾ ಒತ್ತಡ ಹಾಕುತ್ತಿದ್ದ ಆಡಿಟರ್ ಮೇಲೆ ಹಲ್ಲೆ ನಡೆಸಲು ಸಹೋದ್ಯೋಗಿಗಳೇ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮಾಶಂಕರ್ ಹಾಗೂ ವಿನೀಶ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಕಂಪನಿಯ ಕೆಲಸಗಾರ ಉಮಾಶಂಕರ್ ಸುಪಾರಿ ಕೊಟ್ಟು ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಕಂಪನಿಯ ಅಡಿಟರ್ ಸುರೇಶ್ ಎಂಬವರು ಹೆಚ್ಚು ಒತ್ತಡ ಹಾಕುತ್ತಿದ್ದರು. ಇದೇ ಕಾರಣಕ್ಕೆ ಕೃತ್ಯ ಎಸಗಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಸೋನುಗೆ ಜಾಮೀನು: ಇಂದು ಜೈಲಿನಿಂದ ಬಿಡುಗಡೆ
ಕಳೆದ ಒಂದು ವರ್ಷದ ಹಿಂದೆ ಕಂಪನಿಗೆ ಆಡಿಟಿಂಗ್‍ಗಾಗಿ ಸುರೇಶ್ ಸೇರಿದ್ದರು. ಕೆಲಸಕ್ಕೆ ಸೇರಿದ್ದ ಸುರೇಶ್ ಆರೋಪಿಗಳಿಗೆ ಆ ದಿನದ ಕೆಲಸ ಅಂದೇ ಮುಗಿಸುವಂತೆ ಒತ್ತಡ ಹೇರುತ್ತಿದ್ದರು. ಈ ಹಿಂದೆ ಹಲವು ದಿನ ಸಮಯ ಪಡೆದು ಕೆಲಸ ಮಾಡುತಿದ್ದ ಆರೋಪಿಗಳ ವಿರುದ್ಧ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅವರ ಸೂಚನೆ ಮುಖಾಂತರ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದ್ದರು. ಇದೇ ಕಾರಣಕ್ಕೆ ಸುಪಾರಿ ಕೊಟ್ಟು ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳು ಮಾಜಿ ಉದ್ಯೋಗಿ ಮುಖಾಂತರ ಕೆಆರ್ ಪುರಂನ ಸಂದೀಪ್ ಎಂಬಾತನನ್ನು ಸಂಪರ್ಕಿಸಿ, ಆತನ ಗೆಳೆಯರಿಗೆ ಸುಪಾರಿ ಕೊಡಲಾಗಿತ್ತು. ಅದರಂತೆ ರಸ್ತೆಯಲ್ಲಿ ಹೊಗುತ್ತಿದ್ದ ಸುರೇಶ್ ಮೇಲೆ ಹಣ ಪಡೆದಿದ್ದ ಆರೋಪಿಗಳು ರಾಡ್‍ನಿಂದ ಹಲ್ಲೆ ನಡೆಸಿದ್ದರು. ವಿಡಿಯೋ ವೈರಲ್ ಆದ ಬಳಿಕ ಆರೋಪಿಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್: ಪೊಲೀಸ್ ಆಯುಕ್ತರಿಗೆ ದೂರು