ಚೆನ್ನೈ: ಲೋನ್ ಆ್ಯಪ್ (Loan App) ಆಪರೇಟರ್ ಗಳ ಕಿರುಕುಳದಿಂದ ಮನನೊಂದ 23 ವರ್ಷದ ಟೆಕ್ಕಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮೃತನನ್ನು ನರೇಂದ್ರನ್ (Narendran) ಎಂದು ಗುರುತಿಸಲಾಗಿದ್ದು, ಈತ ಮಂಗಳವಾರ ಬೆಳಗ್ಗೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಪೆರುಂಗುಡಿಯ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು.
ಆ್ಯಪ್ ಮೂಲಕ ನರೇಂದ್ರನ್ 33 ಸಾವಿರ ಸಾಲ ಪಡೆದಿದ್ದನು ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾಲ ಮರುಪಾವತಿ ಮಾಡಿದ ಬಳಿಕವೂ ಆ್ಯಪ್ ನವರು ಪದೇ ಪದೇ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಇನ್ನೂ 33 ಸಾವಿರ ಕೊಡಬೇಕು ಎಂದು ಬೆದರಿಕೆ ಹಾಕುತ್ತಿದ್ದರು.
ಮೂಲಗಳ ಪ್ರಕಾರ, ಕುಟುಂಬದ ಸದಸ್ಯರೊಬ್ಬರ ಬಳಿ ನರೇಂದ್ರನ್ 50 ಸಾವಿರ ಸಾಲ ಪಡೆದು ಮರು ಪಾವತಿ ಕೂಡ ಮಾಡಿದ್ದನು. ಆದರೆ ಇದರ ಹೊರತಾಗಿ ಲೋನ್ ಆ್ಯಪ್ ಮೂಲಕ ಮತ್ತೊಮ್ಮೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಲಾಯಿತು. ಅಲ್ಲದೆ ಆತನನ್ನು ಅವಾಚ್ಯವಾಗಿ ನಿಂದಿಸಿ, ಅಶ್ಲೀಲ ಚಿತ್ರಗಳನ್ನು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಇದನ್ನೂ ಓದಿ: ಮಗಳು ಅನ್ಯ ಜಾತಿ ಯುವಕನ ಜೊತೆ ಪರಾರಿ – ತಂದೆ, ತಾಯಿ, ತಮ್ಮ ಆತ್ಮಹತ್ಯೆ
ಸಾಲದ ಆ್ಯಪ್ ತಂಡವು ನರೇಂದ್ರನ್ ಸ್ನೇಹಿತರಿಗೆ ಸಂದೇಶಗಳನ್ನು ಹಾಗೂ ಫೋನ್ ಮಾಡಿ ಕೆಟ್ಟದಾಗಿ ಮಾತನಾಡಿದ್ದಾರೆ. ನರೇಂದ್ರನ್ ತಮ್ಮ ಸಾಲವನ್ನು ಮರುಪಾವತಿಸಲಿಲ್ಲ ಎಂದು ಹೇಳಿದ್ದಾರೆ. ಈ ಚಿತ್ರಹಿಂಸೆ ತಾಳಲಾರದೆ ಮನೆಯಲ್ಲಿ ಒಂಟಿಯಾಗಿದ್ದ ನರೇಂದ್ರನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸದ್ಯ ಆತನ ಫೋನ್‍ನಲ್ಲಿದ್ದ ವಿವಿಧ ಲೋನ್ ಆಪ್‍ಗಳ ಬಗ್ಗೆ ಪೊಲೀಸರು ವಿವರಗಳನ್ನು ಪಡೆದುಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಗದ್ದೆಯಲ್ಲಿ ಅನುಮಾನಾಸ್ಪದವಾಗಿ ಯುವತಿ ಶವ ಪತ್ತೆ- ಇದು ರೇಪ್ & ಮರ್ಡರ್ ಅಂತ ಕುಟುಂಬ ಆರೋಪ