ಬೆಂಗಳೂರು: ಹಣ ಡಬಲ್ ಮಾಡಿಕೊಳ್ಳುವ ಆಸೆಗೆ ಬಿದ್ದ ಯುವತಿಯೊಬ್ಬಳು ವಂಚನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಾಜೀನಗರದಲ್ಲಿ (Bangalore Rajajinagar) ನಡೆದಿದೆ. ಪ್ರಿಯಾಂಕಾ (19) ಆತ್ಮಹತ್ಯೆಗೆ ಶರಣಾಗಿದ್ದ ಯುವತಿ.
ಏನಿದು ಪ್ರಕರಣ?
ಎಂಇಎಸ್ ಕಾಲೇಜಿನಲ್ಲಿ (MES College) ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ ಪ್ರಿಯಾಂಕಾಗೆ ಅದೇ ಕಾಲೇಜಿನಲ್ಲಿ ಓದುತ್ತಿದ್ದ ದಿಗಂತ್ ಹಣ ಡಬಲ್ ಮಾಡಿಕೊಡುವುದಾಗಿ ಹಾಗೂ ಬಿಎಂಡಬ್ಲ್ಯೂ ಕಾರ್ ಕೊಡಿಸುವುದಾಗಿ ಆಸೆ ತೋರಿಸಿದ್ದ. ದಿಗಂತ್ ಮಾತನ್ನು ನಂಬಿದ ಪ್ರಿಯಾಂಕಾ ಮನೆಯವರಿಗೆ ಗೊತ್ತಾಗದಂತೆ ಮನೆಯಲ್ಲಿದ್ದ ಚಿನ್ನವನ್ನು ದಿಗಂತ್‌ಗೆ ಕೊಟ್ಟಿದ್ದಳು.
ಪ್ರಿಯಾಂಕಾಳಿಂದ ಪಡೆದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು (Gold Jewellery) ದಿಗಂತ್ ಅಡಮಾನವಿಟ್ಟು ಹಣ ಪಡೆದುಕೊಂಡಿದ್ದ. ಹಲವು ದಿನ ಕಳೆದ್ರೂ ಹಣ ಕೊಡದೆ, ಚಿನ್ನಾಭರಣವನ್ನೂ ವಾಪಸ್ ನೀಡದೆ ಸತಾಯಿಸಿದ್ದ. ಪ್ರಿಯಾಂಕಾ ಹಲವು ಬಾರಿ ಚಿನ್ನಾಭರಣ ವಾಪಸ್ ಕೊಡು ಎಂದರೂ ದಿಗಂತ್ ಕೇರ್ ಮಾಡಿರಲಿಲ್ಲ. ಹೀಗಾಗಿ ಚಿನ್ನಾಭರಣ ತಾನೂ ತೆಗೆದುಕೊಂಡಿರುವ ವಿಷಯ ಮನೆಯವರಿಗೆ ಗೊತ್ತಾಗುತ್ತದೆ ಎಂಬ ಭಯದಲ್ಲಿದ್ದ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡೆತ್‌ನೋಟ್‌ನಲ್ಲಿ ಆತ್ಮಹತ್ಯೆಗೆ ದಿಗಂತ್ ಕಾರಣ ಎಂದು ಬರೆದಿದ್ದಾಳೆ. ಸದ್ಯ ಡೆತ್ ನೋಟ್ ಆಧಾರದ ಮೇಲೆ ಆರೋಪಿ ದಿಗಂತ್ ಬಂಧನ ಮಾಡಿರೋ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.