ಕಲಬುರಗಿ: ಚುನಾವಣೆಗೆ (Elections) ನಿಂತವರಲ್ಲಿ ಯಾರೂ ಒಳ್ಳೆಯವರು ಕಾಣದಿದ್ದರೆ ನೋಟಾಗೆ ಒತ್ತಿ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಕರೆ ನೀಡಿದ್ದಾರೆ.
ಬುಧವಾರ ನಗರದ ಡಾ.ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ `ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಈ ವೇಳೆ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ `ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಆತ್ಮಸಾಕ್ಷಿಯ ಅಭಿಯಾನ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: 15 ಸಾವಿರ ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ
ಚುನಾವಣೆಯಲ್ಲಿಂದು ಹಣ, ತೋಳ್ಬಲ ಹಾಗೂ ಜಾತಿ ಬಲ ಪ್ರಮುಖ ಪಾತ್ರ ವಹಿಸುತ್ತಿವೆ. ಸಂವಿಧಾನ ಬದ್ಧವಾಗಿ ಸಿಕ್ಕಿರುವ ಮತದಾನದ ಹಕ್ಕನ್ನು ಮತದಾರರು ಅರಿಯಬೇಕು. ಮತ ಮಾರಾಟ ಮಾಡದೇ ಸ್ಫರ್ಧಾಳುಗಳಲ್ಲಿ ಉತ್ತಮರನ್ನು ಆಯ್ಕೆ ಮಾಡಿ. ಒಂದು ವೇಳೆ ಚುನಾವಣೆ ನಿಂತವರಲ್ಲಿ ಯಾರೂ ಒಳ್ಳೆಯವರು ಕಾಣದಿದ್ದರೆ ನೋಟಾಗೆ ಒತ್ತಿ ಎಂದು ಹೇಳಿದ್ದಾರೆ. ಇದನ್ನೂ ಓದಿ: iPhone ತಯಾರಿಸುವ ಕೋಲಾರದ ವಿಸ್ಟ್ರಾನ್ ಖರೀದಿಗೆ ಮುಂದಾದ ಟಾಟಾ
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿಯುತ್ತಿವೆ. ಭ್ರಷ್ಟಾಚಾರ ವ್ಯಾಪಿಸಿದೆ. ಜನಪ್ರತಿನಿಧಿಗಳು ಜನರಿಗೆ ನೀಡಿದ ಆಶ್ವಾಸನೆ ಈಡೇರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಕಾರ್ಯಾಂಗದಲ್ಲಿ ಮಾನವೀಯತೆ ಮರೆತ ಪರಿಣಾಮ ಜನರು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಿ ರೋಸಿ ಹೋಗಿದ್ದಾರೆ. ನ್ಯಾಯಾಲಯಗಳು (Court) ನ್ಯಾಯ ನೀಡುವ ಬದಲಾಗಿ ನಿರ್ಣಯ ನೀಡುತ್ತಿವೆ. ಇನ್ನು ಮಾಧ್ಯಮ ಕ್ಷೇತ್ರವೂ ಸಾಮಾಜಿಕ ಹೊಣೆಗಾರಿಕೆ ಮರೆತಿದ್ದು, ಇಲ್ಲಿಯೂ ಭ್ರಷ್ಟಾಚಾರ ಕಾಲಿಟ್ಟಿದೆ. ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯತೆಯನ್ನು ಮರೆತಂತಿವೆ ಎಂದಿದ್ದಾರೆ.
ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಈಗಾಗಲೇ ವಿಧಾನಸಭೆಯಲ್ಲಿ ಚರ್ಚಿಸಲಾಗಿದೆ. ಪಕ್ಷಾಂತರ ಕಾಯ್ದೆಗೆ ಮತ್ತಷ್ಟು ಬಲ ನೀಡಲು ಚಿಂತನೆ ನಡೆದಿದೆ. ಪ್ರಣಾಳಿಕೆ ಈಡೇರಿಸುವತ್ತ ಆಡಳಿತ ಪಕ್ಷ ಗಮನಹರಿಸಬೇಕಿದೆ. ಇವೆಲ್ಲದರ ಬಗ್ಗೆ ಜನಾಭಿಪ್ರಾಯ ಮೂಡಿಸಲು ಜನರೊಂದಿಗೆ ಸಂವಾದ ನಡೆಸಲಾಗುತ್ತಿದೆ. ಈಗಾಗಲೇ ರಾಯಚೂರು, ಹುಬ್ಬಳ್ಳಿ, ದಾವಣಗೆರೆ, ವಿಜಯಪುರ, ಕೋಲಾರ ಸೇರಿ ಹಲವು ಕಡೆ ಸಂವಾದ ನಡೆಸಿದ್ದು, ಇಂದು ಕಲಬುರಗಿಯಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.