ಜೈಪುರ: ದಲಿತ (Dalit) ವ್ಯಕ್ತಿಯೊಬ್ಬರು ತಾನು ಮಾಡಿದ ಕೆಲಸಕ್ಕೆ ಸಂಬಳ (Payment) ನೀಡುವಂತೆ ಕೇಳಿದ್ದಕ್ಕೆ ಕೆಲ ಕಿಡಿಗೇಡಿಗಳು ಅವರನ್ನು ಥಳಿಸಿ (Assault), ಚಪ್ಪಲಿಯ ಮಾಲೆ ಹಾಕಿ, ಮೂತ್ರ ಕುಡಿಯುವಂತೆ ಒತ್ತಾಯಿಸಿರುವ ವಿಕೃತ ಘಟನೆ ರಾಜಸ್ಥಾನದ (rajasthan) ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ.
ವರದಿಗಳ ಪ್ರಕಾರ ದಲಿತ ವ್ಯಕ್ತಿ ಎಲೆಕ್ಟ್ರಿಷಿಯನ್ ಆಗಿದ್ದು, ತಾನು ಮಾಡಿದ ಕೆಲಸಕ್ಕೆ ಸಂಬಳ ಕೇಳಿದ್ದಾರೆ. ಈ ವೇಳೆ ಕಿಡಿಗೇಡಿಗಳು ವಿಕೃತ ಕೃತ್ಯ ಎಸಗಿದ್ದಾರೆ. ದಾಳಿ ಮಾಡಿದವರಲ್ಲಿ ಒಬ್ಬ ಇದರ ವೀಡಿಯೋವನ್ನೂ ರೆಕಾರ್ಡ್ ಮಾಡಿದ್ದಾನೆ. ವೀಡಿಯೋದಲ್ಲಿ ದಲಿತ ವ್ಯಕ್ತಿ ತನ್ನನ್ನು ಥಳಿಸದಂತೆ ಬೇಡಿಕೊಂಡಿದ್ದಾರೆ. ಬಳಿಕ ವೀಡಿಯೋವನ್ನು ದಾಳಿಕೋರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ವ್ಯಕ್ತಿ ಭರತ್ ಕುಮಾರ್ (28) ನವೆಂಬರ್ 23ರಂದು ಪೊಲೀಸರಿಗೆ ಮೂವರ ವಿರುದ್ಧ ದೂರು ನೀಡಿದ್ದಾರೆ. ಅವರು ಕೆಲವು ಎಲೆಕ್ಟ್ರಿಷಿಯನ್ ಕೆಲಸ ಮಾಡಿದ್ದು, 21,100 ರೂ. ಬಿಲ್ ಮಾಡಿದ್ದಾರೆ. ಕೆಲಸ ಮಾಡಿಸಿಕೊಂಡ ವ್ಯಕ್ತಿ ತಕ್ಷಣಕ್ಕೆ ಅವರಿಗೆ 5,000 ರೂ. ನೀಡಿ, ಉಳಿದ ಹಣವನ್ನು ನವೆಂಬರ್ 19ರಂದು ಡಾಬಾವೊಂದಕ್ಕೆ ಹೋಗಿ ಪಡೆಯಲು ತಿಳಿಸಿದ್ದಾನೆ. ಇದನ್ನೂ ಓದಿ: ಅಬಕಾರಿ ಹಗರಣ – ಸಿಬಿಐ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಮನೀಶ್ ಸಿಸೋಡಿಯಾ ಹೆಸರಿಲ್ಲ
ಅದರಂತೆ ಭರತ್ ಕುಮಾರ್ ಡಾಬಾಗೆ ತೆರಳಿ ಉಳಿದ ಹಣ ಕೇಳಿದ್ದಾರೆ. ಈ ವೇಳೆ ಅವರನ್ನು ರಾತ್ರಿ 9 ಗಂಟೆ ವೇಳೆಗೆ ಬರುವಂತೆ ಸೂಚಿಸಲಾಗಿದೆ. ಭರತ್ ಮತ್ತೆ 9 ಗಂಟೆಗೆ ಡಾಬಾ ಬಳಿ ಬಂದಿದ್ದು, 9:10ರ ವರೆಗೆ ಕಾದು ಕುಳಿತರೂ ಹಣ ನೀಡದಿದ್ದಾಗ ಪೊಲೀಸರಿಗೆ ದುರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ವೇಳೆ ಆರೋಪಿಗಳು ಭರತ್ ಅವರನ್ನು ಹಿಡಿದು ಥಳಿಸಿದ್ದಾರೆ. ಅಮಾನುಷವಾಗಿ ಹೊಡೆದಿದ್ದಲ್ಲದೇ ಚಪ್ಪಲಿಯ ಮಾಲೆ ಹಾಕಿದ್ದಾರೆ. ಆರೋಪಿಗಳಲ್ಲೊಬ್ಬ ಕೃತ್ಯದ ವೀಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾನೆ. ಆರೋಪಿಗಳು ತಮ್ಮ ಮೇಲೆ ಸುಮಾರು 5 ಗಂಟೆಗಳ ಕಾಲ ಹಲ್ಲೆ ನಡೆಸಿದ್ದಾರೆ ಎಂದು ಭರತ್ ಆರೋಪಿಸಿದ್ದಾರೆ. ಇದನ್ನೂ ಓದಿ: ಎಸ್ಕೇಪ್ ಆಗುತ್ತಿದ್ದ ಸರಗಳ್ಳನನ್ನು ಚಾಣಕ್ಷತನದಿಂದ ಹಿಡಿದ ಪೊಲೀಸ್ – ವೀಡಿಯೋ ವೈರಲ್