ಕೋಲ್ಕತ್ತಾ: ಮಾಜಿ ನೌಕಾಪಡೆ ಅಧಿಕಾರಿಯೊಬ್ಬರನ್ನು (Ex-Navy Officer) ತನ್ನ ಮಗನೇ (Son) ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಕೋಲ್ಕತ್ತಾದಲ್ಲಿ (Kolkata) ನಡೆದಿದೆ. ಮಾಜಿ ಅಧಿಕಾರಿಯ ಮೃತದೇಹ ಛಿದ್ರವಾದ ಸ್ಥಿತಿಯಲ್ಲಿ ಬುರುಯಿರ್‌ಪುರ ಪ್ರದೇಶದ ಕೊಳದಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಉಜ್ವಲ್ ಚಕ್ರವರ್ತಿ (55) ಎಂದು ಗುರುತಿಸಲಾಗಿದೆ. ಅವರು 2000 ಇಸವಿಯಲ್ಲಿ ನಿವೃತ್ತರಾದ ಭಾರತೀಯ ನೌಕಾಪಡೆಯ ಮಾಜಿ ನಾನ್ ಕಮಿಷನ್ಡ್ ಅಧಿಕಾರಿ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಚಕ್ರವರ್ತಿ ಅವರು ನಾಪತ್ತೆಯಾಗಿರುವುದಾಗಿ ನವೆಂಬರ್ 15 ರಂದು ಅವರ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ ಬಳಿಕ ಬುರುಯಿರ್‌ಪುರದ ಕೊಳದಲ್ಲಿ ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಸಿಎಂ ಮಂಗಳೂರಿನಲ್ಲಿ ಇರುವಾಗಲೇ ಸ್ಕೆಚ್ – ಟೈಮರ್ ಕೈಕೊಟ್ಟು ದಾರಿ ಮಧ್ಯೆ ಬಾಂಬ್ ಸ್ಫೋಟ
ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಮಾಜಿ ಅಧಿಕಾರಿಯ ಹತ್ಯೆಯನ್ನು ಅವರ ಮಗನೇ ನಡೆಸಿರುವುದಾಗಿ ತಿಳಿದುಬಂದಿದೆ. ಉಜ್ವಲ್ ಚಕ್ರವರ್ತಿ ಮದ್ಯವ್ಯಸನಿಯಾಗಿದ್ದು, ತನ್ನ ಮಗನ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದರು. ನವೆಂಬರ್ 14ರಂದು ಜಗಳ ಅತಿರೇಕಕ್ಕೆ ಹೋಗಿದ್ದು, ಮಗ ಪ್ರತೀಕಾರವಾಗಿ ತಂದೆಯ ಮೇಲೆ ದಾಳಿ ಮಾಡಿದ್ದಾನೆ. ಇದರಿಂದ ಉಜ್ವಲ್ ಚಕ್ರವರ್ತಿ ಸಾವನ್ನಪ್ಪಿದ್ದಾರೆ.
ತಂದೆಯ ಕೊಲೆಯ ಬಳಿಕ ಅವರ ಛಿದ್ರವಾದ ಮೃತದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ, ಕೊಳದಲ್ಲಿ ಎಸೆದಿದ್ದಾರೆ. ಮಗನ ಕೃತ್ಯಕ್ಕೆ ಆತನ ತಾಯಿ ಕೂಡಾ ಸಹಾಯ ಮಾಡಿರುವುದಾಗಿ ತಿಳಿದುಬಂದಿದೆ. ಇದೀಗ ಘಟನೆಯ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಜೈಪುರದಲ್ಲೊಂದು ಅಮಾನುಷ ಕೃತ್ಯ – ದಂಪತಿಗೆ ಚಪ್ಪಲಿ ಹಾರ ಹಾಕಿ, ಮೂತ್ರ ಕುಡಿಸಿದ್ರು