ಮಂಗಳೂರು: ರಾಜ್ಯದಲ್ಲಿ ಈಗ ಮೀಸಲಾತಿ ವಿಚಾರವೇ ಹೆಚ್ಚು ಚರ್ಚೆಯಲ್ಲಿದೆ. ಇದೀಗ ಈಡಿಗ-ಬಿಲ್ಲವ (Billava) ಸಮುದಾಯವನ್ನು ಪ್ರವರ್ಗ 1ರಡಿ ಸೇರ್ಪಡೆಗೆ ಹಕ್ಕೊತ್ತಾಯ ಕೇಳಿ ಬಂದಿದೆ. ಕರಾವಳಿಯಲ್ಲಿ ನಿರ್ಣಾಯಕ ಮತದಾರರಾಗಿರುವ ಬಿಲ್ಲವ ಸಮುದಾಯ ಈ ವಿಚಾರದಲ್ಲಿ ಚುನಾವಣೆ ಹೊತ್ತಲ್ಲೇ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ನಡುವೆ ಸಮುದಾಯದ ಸ್ವಾಮೀಜಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಬೃಹತ್ ಪಾದಯಾತ್ರೆಗೂ (Padayatra) ತಯಾರಿ ಮಾಡಿಕೊಂಡಿದ್ದಾರೆ.
ಕರಾವಳಿಯಲ್ಲಿ (Karavli) ಮೀಸಲಾತಿ ಹೆಸರಲ್ಲಿ ಬಿಲ್ಲವರು ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಚುನಾವಣೆ ಹೊತ್ತಲ್ಲೇ ಬಿಜೆಪಿ (BJP) ಸರ್ಕಾರದ ವಿರುದ್ಧ ತೊಡೆ ತಟ್ಟಲು ಈಡಿಗ-ಬಿಲ್ಲವ ಸಮುದಾಯ ಸಜ್ಜಾಗಿದ್ದು ಜನವರಿ ಅಂತ್ಯದಲ್ಲಿ ಬೃಹತ್ ಸಮಾವೇಶವನ್ನು ನಡೆಸುವುದಕ್ಕೆ ನಿರ್ಧರಿಸಿದೆ. ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಸಭೆ ಸೇರಿದ ಬಿಲ್ಲವ ಮುಖಂಡರು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ನಿರ್ಣಾಯಕವಾಗಿರೋ ಬಿಲ್ಲವ ವೋಟ್ (Vote) ಬ್ಯಾಂಕ್ ಹಲವು ಬೇಡಿಕೆಗಳನ್ನು ಮುಂದಿಟ್ಟು ಈ ಸಮಾವೇಶ ನಡೆಸುತ್ತಿದೆ. ರಾಜ್ಯದಲ್ಲಿ ಸುಮಾರು 75 ಲಕ್ಷದಷ್ಟಿರೋ ಈಡಿಗ-ಬಿಲ್ಲವ ಸಮುದಾಯ ಸುಮಾರು 26 ಪಂಗಡಗಳನ್ನು ಹೊಂದಿದೆ. ಸದ್ಯ ಪ್ರವರ್ಗ 2ಎ (2A) ಅಡಿ ಸೇರಿರೋ ಬಿಲ್ಲವ-ಈಡಿಗ ಸಮುದಾಯ ಪ್ರವರ್ಗ 1ರಡಿ ಸೇರ್ಪಡೆಗೆ ಹಕ್ಕೊತ್ತಾಯ ಮಾಡಿದೆ. ಇದರ ಜೊತೆ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪಿಸಬೇಕು, ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಯವು ಇದೆ. ಇದನ್ನೂ ಓದಿ: ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯ – ಪ್ರಸವದ ವೇಳೆ ಬಾಣಂತಿ, ಅವಳಿ ಶಿಶುಗಳು ಸಾವು
ಈ ನಡುವೆ ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಕಲಬುರಗಿಯ ಪ್ರಣಾವಾನಂದ ಸ್ವಾಮೀಜಿ (Pranavananda Swamiji) ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಮಂಗಳೂರಿನ ಕುದ್ರೋಳಿ ದೇವಸ್ಥಾನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ವರೆಗೆ ಸುಮಾರು 658 ಕಿ.ಮೀ ದೂರದ ಪಾದಯಾತ್ರೆಯನ್ನು ನಡೆಸಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಲಿದ್ದಾರೆ. ಜನವರಿ 6 ರಂದು ಈ ಪಾದಯಾತ್ರೆ ಆರಂಭವಾಗಲಿದ್ದು, ಒಟ್ಟು 35 ದಿನಗಳ ಕಾಲ ಈ ಪಾದಯಾತ್ರೆ ಸಾಗಲಿದೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. 500 ಕೋಟಿ ರೂ. ಅನುದಾನ ಮೀಸಲಿರಿಸಿ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪಿಸಬೇಕು. ಈಡಿಗ-ಬಿಲ್ಲವ ಸಮುದಾಯವನ್ನು ಪ್ರವರ್ಗ 1 ರಡಿ ಸೇರ್ಪಡೆಗೊಳಿಸಬೇಕು. ಚುನಾವಣೆ ಹೊತ್ತಲ್ಲಿ ಟಿಕೆಟ್ ನೀಡುವಲ್ಲಿ ಬಿಲ್ಲವರ ಕಡೆಗಣನೆ ಮಾಡುತಿದ್ದು ಹೀಗಾಗಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬುದು ಈ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಮಗನಿಗೆ ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ: ರೇಣುಕಾಚಾರ್ಯ
ನಾರಾಯಣ ಗುರು ಟ್ಯಾಬ್ಲೋ, ಪಠ್ಯ ಪುಸ್ತಕ ವಿವಾದದ ಬಳಿಕ ಕರಾವಳಿಯ ಪ್ರಬಲ ಬಿಲ್ಲವ ಸಮುದಾಯದ ಆಕ್ರೋಶಕ್ಕೆ ಬಿಜೆಪಿ ತುತ್ತಾಗಿತ್ತು. ಇದೀಗ ಕಳೆದ ಆರು ವರ್ಷಗಳ ಮಹಾ ಬೇಡಿಕೆಗೆ ಚುನಾವಣೆ ಹೊತ್ತಲ್ಲೇ ಮರುಜೀವ ಬಂದಿದ್ದು, ಬಿಜೆಪಿ ಇದನ್ನು ಹೇಗೆ ನಿಭಾಯಿಸುತ್ತೆ ಎಂದು ಕಾದುನೋಡಬೇಕಿದೆ.