ಹುಬ್ಬಳ್ಳಿ: ರಾಜ್ಯದ ಮಹಾನಗರ ಪಾಲಿಕೆಗಳ ಮಹಾಪೌರರು ಪಾಲಿಕೆಯ ಸಭೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಗೌನ್ (Gown) ಧರಿಸುವುದು ಆಯಾ ಮಹಾನಗರ ಪಾಲಿಕೆಗಳ ಮಹಾಪೌರರ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದ್ದು, ಹು-ಧಾ ಮಹಾನಗರ ಪಾಲಿಕೆಯ ‘ಕೈ’ (Congress) ಸದಸ್ಯರಿಗೆ ಹಿನ್ನಡೆಯಾಗಿದೆ.
ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಈ ಕುರಿತು ಸ್ಪಷ್ಟನೆ ನೀಡಿದ್ದು, ಗೌನ್ ಧರಿಸುವ ವಿಷಯದಲ್ಲಿ ಸ್ಪಷ್ಟನೆ ಕೋರಿ ಹು-ಧಾ ಮಹಾನಗರ ಪಾಲಿಕೆಯ ಮೇಯರ್ ಈರೇಶ್ ಅಂಚಟಗೇರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪಾಲಿಕೆಯ ಸಾಮಾನ್ಯ ಸಭೆ ಅ. 28 ರಂದು ಧಾರವಾಡದಲ್ಲಿ (Dharwad) ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ. ಪಾಲಿಕೆಯ ಸೆಪ್ಟೆಂಬರ್ ಮಾಸಿಕ ಸಭೆಯಲ್ಲಿ ಮೇಯರ್ ಈರೇಶ್ ಅಂಚಟಗೇರಿ ಗೌನ್ ಧರಿಸದೆ ಪಾಲ್ಗೊಂಡಿದ್ದನ್ನು ಕಾಂಗ್ರೆಸ್ ಸದಸ್ಯರು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಸಭೆ ನಡೆಸಲು ಅವಕಾಶ ನೀಡಿರಲಿಲ್ಲ. ಬಳಿಕ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿತ್ತು. ಇದನ್ನೂ ಓದಿ: ಭಾರತೀಯ ರೂಪಾಯಿ, ಏಮ್ಸ್ ಯೋಜನೆ ಬಗ್ಗೆ ಟೀಕೆ – ಬಿಜೆಪಿ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ
ಪೂರ್ವ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಪೌರ ಸನ್ಮಾನ ಕಾರ್ಯಕ್ರಮದಲ್ಲೂ ಮೇಯರ್ ಗೌನ್ ಧರಿಸಿರಲಿಲ್ಲ. ಮುಖ್ಯಮಂತ್ರಿ ಅವರ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಹೀಗೆ ಮಾಡಿದ್ದೆ ಎಂದು ಮೇಯರ್ ತಿಳಿಸಿದ್ದರು. ಇದೀಗ ಸರ್ಕಾರವೇ ಲಿಖಿತವಾಗಿ ಸ್ಪಷ್ಟನೆ ನೀಡಿದೆ. ಆದರೆ, ಮೇಯರ್ ಗೌನ್ ಧರಿಸುವುದಿಲ್ಲ ಎಂಬುದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಧಾರವಾಗಬೇಕು ಎಂಬುದು ಕಾಂಗ್ರೆಸ್ ವಾದವಾಗಿದೆ. ಇನ್ನು ಮುಂದೆ ಪಾಲಿಕೆ ಸಭೆಗಳಲ್ಲಿ, ಮಹತ್ವದ ಕಾರ್ಯಕ್ರಮಗಳಲ್ಲಿ ಗೌನ್ ಧರಿಸುವುದಿಲ್ಲ ಎಂದು ಮೇಯರ್ ಈರೇಶ್ ಅಂಚಟಗೇರಿ ತಿಳಿಸಿದ್ದರು. ಇದನ್ನೂ ಓದಿ: ಕೆಲಸವಿಲ್ಲದವ ಮಂಗನ ಜೊತೆ ಆಡಲು ಹೊರಟಂತೆ ಸುನಿಲ್ ಕುಮಾರ್ ವಿವಾದ ಸೃಷ್ಟಿಸಲು ಹೊರಟಿದ್ದಾರೆ: ಕಾಂಗ್ರೆಸ್