ಮುಂಬೈ: ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿಸಿ ಮೃತ ವ್ಯಕ್ತಿಯೊಬ್ಬರ 19.70 ಕೋಟಿ ಮೌಲ್ಯದ ಆಸ್ತಿಯನ್ನು ಕಬಳಿಸಿದ ಆರೋಪದಡಿ ಕ್ರೈಸ್ತ ಪ್ರಾದಿ, ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮತ್ತು ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಅಂಜಲಿ ಅಗರ್ವಾಲ್ (30), ಥಾಮಸ್ ರಾಮುಲ್ ಗೋಡ್ಪವಾರ್ (50) ಮತ್ತು ಮಹೇಶ್ ಕಾಟ್ಕರ್ (37) ಎಂದು ಗುರುತಿಸಲಾಗಿದೆ. ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿ ಅಗರ್ವಾಲ್, ಅಲ್ಲಿಗೆ ಬರುತ್ತಿದ್ದ 35 ವರ್ಷದ ಗ್ರಾಹಕರೊಬ್ಬರನ್ನು ಪ್ರೀತಿಸುತ್ತಿದ್ದಳು. ನಂತರ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಆದರೆ 2021ರ ನವೆಂಬರ್‌ನಲ್ಲಿ ವ್ಯಕ್ತಿ ಸಾವನ್ನಪ್ಪಿದರು. ಈ ವಿಚಾರ ತಿಳಿದ ಅಂಜಲಿ, ಇಬ್ಬರು ಆರೋಪಿಗಳ ಸಹಾಯದಿಂದ ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿಸಿ ಥಾಣೆ (Thane) ನಗರದ ಕವೇಸರ್‌ನಲ್ಲಿ 19.70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದೋಚಿದ್ದಾಳೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಾಲೋಜಿ ಶಿಂಧೆ ಹೇಳಿದ್ದಾರೆ.
ಈ ವಿಚಾರ ತಿಳಿದ ಬಳಿಕ ಮೃತ ವ್ಯಕ್ತಿಯ ತಾಯಿ, ನೌಪಾದ ಪೊಲೀಸ್ ಠಾಣೆಯಲ್ಲಿ (Naupada police station) ದೂರು ದಾಖಲಿಸಿದ್ದು, ಆರೋಪಿಗಳು ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ತೋರಿಸಿ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೆಎಸ್‍ಆರ್‌ಟಿಸಿಗೆ ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ ಡಿಕ್ಕಿ – 9 ಮಂದಿ ಸಾವು, 40 ಜನರಿಗೆ ಗಾಯ
ಈ ದೂರಿನ್ವಯ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 7 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದನ್ನೂ ಓದಿ: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ – 8 ಮಂದಿ ಸಾವು, ಮೋದಿ ಸಂತಾಪ