ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಐಪಿಎಸ್ ಅಧಿಕಾರಿ (IPS officer) ಲೋಹಿಯಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಯ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ಕುಮಾರ್ ಲೋಹಿಯಾ ಅವರ ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಲೋಹಿಯಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯಾಸಿರ್ ಅಹ್ಮದ್ (Yasir Ahmed) ಪೊಲೀಸರು ಬಂಧಿಸಿದ್ದಾರೆ. ಯಾಸಿರ್ ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿದೆ. ಇದನ್ನೂ ಓದಿ: ಮನೆಯಲ್ಲಿ ಕತ್ತು ಸೀಳಿ ಐಪಿಎಸ್ ಅಧಿಕಾರಿ ಹತ್ಯೆ
ಕೊಲೆಯ ನಂತರ ಯಾಸಿರ್ ಪರಾರಿಯಾಗಿದ್ದ. ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಯಾಸಿರ್ ಅಹ್ಮದ್ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.
ಹತ್ಯೆಗೂ ಮುನ್ನ ಅಧಿಕಾರಿ ಲೋಹಿಯಾ ಅವರು ತಮ್ಮ ಕಾಲಿಗೆ ಎಣ್ಣೆಯನ್ನು ಹಚ್ಚುತ್ತಿದ್ದರು. ನಂತರ ಒಡೆದ ಬಾಟಲ್‌ನಿಂದ ಅವರ ಕತ್ತನ್ನು ಸೀಳಿ ಹತ್ಯೆ ಮಾಡಲಾಗಿದೆ. ಕೊಲೆ ಬಳಿಕ ಶಂಕಿತ ಆರೋಪಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯಾಸಿರ್ ಅಹ್ಮದ್ ಸುಮಾರು ಆರು ತಿಂಗಳಿನಿಂದ ಲೋಹಿಯಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಆತ ಖಿನ್ನತೆಯಿಂದ ಬಳಲುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟಿವಿ, ವೆಬ್‍ಸೈಟ್‍ಗಳಲ್ಲಿ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡಬೇಡಿ: ಕೇಂದ್ರ ಖಡಕ್ ಸೂಚನೆ
ಯಾಸಿರ್ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುವ ಡೈರಿ ಸೇರಿದಂತೆ ಕೆಲವು ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ʼಆತ್ಮೀಯ ಸಾವೇ.. ನನ್ನ ಜೀವನದಲ್ಲಿ ಬಾʼ ಎಂದು ಒಂದು ಟಿಪ್ಪಣಿ ಬರೆಯಲಾಗಿದೆ. ʼಕ್ಷಮಿಸಿ, ನಾನು ಕೆಟ್ಟ ದಿನ, ವಾರ, ತಿಂಗಳು, ವರ್ಷ, ಜೀವನವನ್ನು ಹೊಂದಿದ್ದೇನೆʼ ಎಂದು ಡೈರಿಯಲ್ಲಿ ಬರೆದಿದೆ.
ನನ್ನ ಜೀವನವನ್ನು ದ್ವೇಷಿಸುತ್ತೇನೆ. ಜೀವನವು ಕೇವಲ ದುಃಖ ಎಂದು ಬರೆಯಲಾಗಿದೆ. ಅಲ್ಲದೇ ಫೋನ್ ಬ್ಯಾಟರಿಯ ರೇಖಾಚಿತ್ರವನ್ನು ಬಿಡಿಸಿ ಅದರಲ್ಲಿ, ಪ್ರೀತಿ 0%, ಉದ್ವೇಗ 90%, ದುಃಖ 99% , ಹುಸಿನಗು 100% ಎಂದಿದೆ.