ಕಲಬುರಗಿ: ಶಾಸಕ ಪ್ರಿಯಾಂಕ್ ಖರ್ಗೆ ಅವರ `ಲಂಚ-ಮಂಚ’ದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಹರತಾಳು ಹಾಲಪ್ಪ, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಬ್ಲೂಫಿಲಂ ನೋಡಿದ್ದಾಗ ಬಿಜೆಪಿ ಮಹಿಳೆಯರು ಎಲ್ಲಿದ್ದರು ಎಂದು ಪ್ರಶ್ನಿಸಿದೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಲತಾ ರಾಠೋಡ, ಶಾಸಕ ಪ್ರಿಯಾಂಕ್ ಖರ್ಗೆ ಈಗಾಗಲೇ ರಾಜ್ಯದ ಮಹಿಳೆಯರಿಗೆ ತಮ್ಮ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸಲು ತಯಾರಿದ್ದೇನೆ ಎಂದಿದ್ದಾರೆ. ಆದರೆ ಬಿಜೆಪಿಯವರು ಲಂಚ ಮತ್ತು ಮಂಚ ಪದಗಳನ್ನು ತಮಗೆ ಬೇಕಾದಂತೆ ತಿರುಚಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಖಂಡಿಸಿದ್ದಾರೆ. ಇದನ್ನೂ ಓದಿ: ಲಂಚ-ಮಂಚ ಹೇಳಿಕೆಗೆ ಕೌಂಟರ್ ಕೊಟ್ಟ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸುದೀರ್ಘ ಉತ್ತರ
ಬಿಜೆಪಿಯವರು ಒಂದು ವೇಳೆ ಚಿತ್ತಾಪುರ ಚಲೋ ಹೋರಾಟ ಕೈಬಿಡದಿದ್ದರೆ ಎರಡು ಪಟ್ಟು ಮಹಿಳೆಯರನ್ನು ಸಂಘಟಿಸಿ ಕಳಂಕಿತ ಸಚಿವರು, ಶಾಸಕರ ವಿರುದ್ಧ ಹೋರಾಟಕ್ಕಿಳಿಯಲು ತಯಾರಿದ್ದೇವೆ ಎಂದು ಎಚ್ಚರಿಸಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಅವರ ಪದ ಬಳಕೆಯಲ್ಲಿ ವ್ಯತ್ಯಾಸ ಆಗಿದೆ. ಆದರೆ ಬಿಜೆಪಿ ನಾಯಕರ ಕರ್ಮಕಾಂಡ ಇಡೀ ರಾಜ್ಯದ ಜನತೆಗೆ ಗೊತ್ತಿಲ್ವಾ? ಈ ಹಿಂದೆ ಹರತಾಳು ಹಾಲಪ್ಪ, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಬ್ಲೂಫಿಲಂ ನೋಡಿದ್ದಾಗ ಬಿಜೆಪಿ ಮಹಿಳೆಯರು ಎಲ್ಲಿ ಇದ್ದರು. ಎಲ್ಲಿ ಹೋಗಿದ್ದರು. ಇನ್ನು ಹಿರಿಯ ರಾಜಕಾರಣಿ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾಡಿರುವ ತಪ್ಪುಗಳನ್ನು ಮರೆಮಾಚುವುದು ಸರಿನಾ? ಮಹಿಳೆಯರು ಎಂದರೆ ಕಸದ ಬುಟ್ಟಿ ತರಹ ಬಳಸಿ ಬಿಸಾಕುವುದೇನಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಈ ಬಾರಿ ಗುಜರಾತಿಗೆ ಐಪಿಎಲ್ ಕಪ್, ಮೋಟಾಬಾಯಿ ಖಚಿತಪಡಿಸಬೇಕು: ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ತುಂಬಾ ಗೌರವ, ಘನತೆ ಹಾಗೂ ಮರ್ಯಾದೆಯಿಂದ ಕಾಣುತ್ತಾರೆ. ಬಿಜೆಪಿ ಮಹಿಳಾ ಮೋರ್ಚಾ ನಿಜವಾಗಿಯೂ ನಾಡಿನ ಹೆಣ್ಣುಮಕ್ಕಳ ಪರ ಕೆಲಸ ಮಾಡಬೇಕಿದೆ. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರು ಅನುಭವಿಸುತ್ತಿರುವ ಕಿರುಕುಳ, ಅನ್ಯಾಯ, ಯಾತನೆ ಬಗ್ಗೆ ಸ್ಪಂದಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಚಂದ್ರಿಕಾ ಪರಮೇಶ್ವರ, ವಾಣಿಶ್ರೀ ಸಗರಕರ್, ಶೀಲಾ ಕಾಶಿ, ಪ್ರಭಾವತಿ ಪಾಟೀಲ್, ರೇಣುಕಾ ಸಿಂಗೆ, ಪ್ರಿಯಾದರ್ಶಿನಿ, ಗೀತಾ ಮುದಗಲ್, ಮಂಜುಳಾ ಪಾಟೀಲ್ ಉಪಸ್ಥಿತರಿದ್ದರು.