Bengaluru CityKarnatakaLatestLeading NewsMain Post

ಲಂಚ-ಮಂಚ ಹೇಳಿಕೆಗೆ ಕೌಂಟರ್ ಕೊಟ್ಟ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸುದೀರ್ಘ ಉತ್ತರ

ಬೆಂಗಳೂರು: ಭ್ರಷ್ಟಾಚಾರ ವಿಚಾರವಾಗಿ ಲಂಚ-ಮಂಚ ಟೀಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹಾಗೂ ಬಿಜೆಪಿ ನಡುವೆ ವಾರ್‌ ನಡೆಯುತ್ತಿದೆ.

ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕ್‌ ಖರ್ಗೆ ʼಲಂಚ-ಮಂಚʼ ಎಂದು ಗಂಭೀರ ಆರೋಪ ಮಾಡಿ ಟೀಕಿಸಿದ್ದರು. ಅದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಕೌಂಟರ್‌ ಕೊಟ್ಟಿತ್ತು. ಇದಕ್ಕೆ ಪ್ರತಿಯಾಗಿ ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬಿಜೆಪಿಗೆ ಖರ್ಗೆ ಮತ್ತೆ ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಚಾಲನೆ – ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗುವಂತೆ ಕರೆ

ಫೇಸ್‌ಬುಕ್‌ ಪೋಸ್ಟ್‌ನಲ್ಲೇನಿದೆ?
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ಹಗರಣಗಳು ದಿನಂಪ್ರತಿ ಬೆಳಕಿಗೆ ಬರುತ್ತಲೇ ಇವೆ. ಇದು ಈ ಸರ್ಕಾರದ ಭ್ರಷ್ಟಾಚಾರದ ವಿರಾಟ್ ರೂಪ ಹಾಗೂ ಲಂಚಕೋರ ಆಡಳಿತಕ್ಕೆ ಹಿಡಿದ ಕೈಗನ್ನಡಿ. ವಿಷೇಶವಾಗಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ರಾಜ್ಯದ ಸಾವಿರಾರು ಯುವಕರ ಕಣ್ಣಲ್ಲಿ ನೀರು ತರಿಸುತ್ತಿದೆ.

ಇತ್ತೀಚಿಗೆ ನಡೆದ KPTCL ಪರೀಕ್ಷೆಯಲ್ಲಿ ಆಗಿರುವ ಅಕ್ರಮಕ್ಕೆ ಯಾವುದೇ ಶಿಕ್ಷೆ ನೀಡಿದರೂ ಕಮ್ಮಿಯೇ. ಸರ್ಕಾರಿ ಕೆಲಸ ಒಂದಿಡೀ ಕುಟುಂಬವನ್ನೇ ಬಡತನದಿಂದ ಮೇಲೆತ್ತುವ, ಸುಭದ್ರ ಭವಿಷ್ಯ ಕಟ್ಟಿಕೊಡುವ ಅವಕಾಶ. ಲಂಚ ಪಡೆದು ಪರೀಕ್ಷೆಯಲ್ಲಿ ಅಕ್ರಮವಾಗಿ ಉತ್ತೀರ್ಣರಾಗುವ ಮೂಲಕ ವ್ಯವಸ್ಥಿತವಾಗಿ ಬಡವರ್ಗದ ಹಾಗೂ ಯೋಗ್ಯ ಯುವ ಜನರ ಕೈಯಿಂದ ಆ ಅವಕಾಶವನ್ನು ಕಿತ್ತುಕೊಳ್ಳುವುದನ್ನು ಈ ಭ್ರಷ್ಟ ಬಿಜೆಪಿ ಸರ್ಕಾರ ಸಕ್ರಮಗೊಳಿಸಿಬಿಟ್ಟಿದೆ. ಇದನ್ನೂ ಓದಿ: ತಿರಂಗಮಯವಾದ ಸುಪ್ರಸಿದ್ಧ ಮುಗಳಖೋಡ ಶ್ರೀಮಠ

ಇದನ್ನು ವಿರೋಧಿಸಿ ನಾನು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಈ ಸರ್ಕಾರವನ್ನು ಲಂಚ-ಮಂಚದ ಸರ್ಕಾರವೆಂದು ಕರೆದಿದ್ದೆ. ತನ್ನ ಅಕ್ರಮಗಳನ್ನು ಮುಚ್ಚಿಕೊಳ್ಳಲು, ತನ್ನ ಭ್ರಷ್ಟ ರೂಪವನ್ನು ರಕ್ಷಿಸಿಕೊಳ್ಳಲು, ಹಾಗೂ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳಲು ನನ್ನ ಹೇಳಿಕೆಯನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿರುಚಿ KPTCL ಅಕ್ರಮವನ್ನು ಈ ಮೂಲಕ ಮುಚ್ಚಿ ಹಾಕಲು ಬಿಜೆಪಿ ಹೊರಟು ನಿಂತಿದೆ.

ಕೆಲಸಕ್ಕಾಗಿ ಬಂದ ಯುವತಿಯನ್ನು ಈ ಸರ್ಕಾರದ ಮಂತ್ರಿ ಮೋಸ ಮಾಡಿ, ಸಿಕ್ಕಿ ಬಿದ್ದು ರಾಜೀನಾಮೆ ನೀಡಬೇಕಾಯಿತು. ಆದರೆ ಅವರ ಬಳಿ ಕ್ಷಮೆಯನ್ನು ಬಿಜೆಪಿಯ ಯಾರೊಬ್ಬರೂ ಕೇಳಲಿಲ್ಲ! ಕೇಂದ್ರ ಮಂತ್ರಿಯೊಬ್ಬರು ಅಶ್ಲೀಲವಾಗಿ ಪರಸ್ತ್ರೀಯೊಬ್ಬರೊಂದಿಗೆ ನಡೆಸಿದ್ದ ವಿಡಿಯೋ ವೈರಲ್ ಆದಾಗ ಹೆಣ್ಣನ್ನು ತೃಣವಾಗಿ ಕಂಡಿದ್ದ ಅವರ ಬಳಿ ಬಿಜೆಪಿಯ ಯಾರೊಬ್ಬರೂ ಕ್ಷಮೆಗೆ ಆಗ್ರಹಿಸಲಿಲ್ಲ.

ಸದನದಲ್ಲಿ ಕೂತು ಪಾರ್ನ್ ವೀಕ್ಷಿಸಿ ಇಡೀ ರಾಜ್ಯದ ಹೆಣ್ಣು ಕುಲಕ್ಕೆ ಅಪಮಾನ ಮಾಡಿದವರ ಬಳಿ ಕ್ಷಮೆಗೆ ಆಗ್ರಹಿಸಲಿಲ್ಲ. ಬದಲಾಗಿ ಮತ್ತೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದರು. ಸೋತವರನ್ನ MLC ಮಾಡಿ DCM ಮಾಡಿದ್ದು ಇದೇ BJP ಪಕ್ಷ. ಈ ಸರ್ಕಾರದ ಮಂತ್ರಿಯೊಬ್ಬರ ʼಈ ರಾಜ್ಯದ ಯಾವ ಶಾಸಕ ಏಕ ಪತ್ನಿವೃತಸ್ಥʼ ಎಂಬ ಪ್ರಶ್ನೆ ಬಿಜೆಪಿಗೆ ಈ ನಾಡಿನ ಹೆಣ್ಣುಮಕ್ಕಳ ಅವಮಾನದಂತೆ ಕಂಡುಬರಲಿಲ್ಲ. ಈ ನಾಡಿನ ಹೆಣ್ಣುಮಕ್ಕಳು ಕೆಲಸಕ್ಕಾಗಿ ಹೋದಾಗ ಅಶ್ಲೀಲವಾಗಿ ವರ್ತಿಸಿ ʻಮೀ ಟೂʼ ಪ್ರಕರಣದಲ್ಲಿ ಬಿಜೆಪಿಯ ಇಬ್ಬರು ಸಂಸದರು ಸಿಕ್ಕಿ ಬಿದ್ದಾಗ ಬಿಜೆಪಿ ಅವರ ಬಳಿ ಕ್ಷಮೆ ಕೇಳಲಿಲ್ಲ. ಇದನ್ನೂ ಓದಿ: ಕೇಂದ್ರದ ಹರ್ ಘರ್ ತಿರಂಗಾ ಅಭಿಯಾನವನ್ನು ಹೊಗಳಿದ ಜಮೀರ್

ಈ ರಾಜ್ಯದ ಸಚಿವ ಸಂಪುಟದ ಸಚಿವರ ʻಮಂಚದ ವಿಚಾರʼಕ್ಕೆ ಹೆದರಿ ಹೈಕೋರ್ಟ್‌ನಿಂದ ಸ್ಟೇ ತಂದಾಗ ಬಿಜೆಪಿ ಇವರ‍್ಯಾರ ಬಳಿಯೂ ಕ್ಷಮೆ ಕೇಳಲಿಲ್ಲ. ಈ ಸರ್ಕಾರದ ಅನಿಷ್ಟ ಆಡಳಿತಕ್ಕೆ ಇವರ ಕಾರ್ಯಕರ್ತರೇ ‘ಜನಾಕ್ರೋಶ’ ರೂಪಿಸಿ ಇವರ ಜನೋತ್ಸವಕ್ಕೆ ಬ್ರೇಕ್ ಹಾಕಿದ್ದಾರೆ. ಇನ್ನು ಈಗಷ್ಟೇ ಬಿಜೆಪಿ ಸರ್ಕಾರದ ಮಂತ್ರಿಯೊಬ್ಬರು ʻಬಿಜೆಪಿ ಸರ್ಕಾರ ಆಡಳಿತ ಮಾಡುತ್ತಿಲ್ಲ, ಬದಲಿಗೆ ಮ್ಯಾನೇಜ್ಮೆಂಟ್ ನಡೆಸುತ್ತಿದ್ದೇವೆʼ ಎಂದು ಮಾತನಾಡಿರುವ ಆಡಿಯೋ ವೈರಲ್ ಆಗುತ್ತಿದೆ.

ಈ ಸರ್ಕಾರದಲ್ಲಿ ಆಗಿರುವ ಹಾಗೂ ಈಗಲೂ ಘಟಿಸುತ್ತಿರುವ ಮಂಚ-ಲಂಚದ ಪ್ರಕರಣಗಳಿಗೆ ಕನ್ನಡಿಯಾಗಿ ಮಾತನಾಡುವುದು ವಿರೋಧ ಪಕ್ಷವಾಗಿ ನಮ್ಮ ಆದ್ಯ ಕರ್ತವ್ಯ. ಆ ಕೆಲಸವನ್ನು ಇಂದು ನಾವು ಸರಿಯಾಗಿ ನಿರ್ವಹಿಸುತ್ತಿರುವುದರಿಂದಲೇ ಬಿಜೆಪಿ ನಾಯಕರು ಇಂದು ವಿಚಲಿತರಾಗಿ ಹೇಳಿಕೆ ನೀಡುತ್ತಿರುವುದು.

ನನ್ನ ಇಡೀ ಜೀವನ ಬಾಬಾಸಾಹೇಬರ ಆದರ್ಶಗಳ ಹಾದಿಯಲ್ಲಿ ಸಾಗಿದ್ದೇನೆ. ನಾಡಿನ ಹೆಣ್ಣುಮಕ್ಕಳಿಗೆ ಯಾವುದೇ ರೀತಿಯಲ್ಲಿ ಅವಮಾನವಾಗುವ ರೀತಿಯಲ್ಲಿ ನನ್ನ ಮಾತುಗಳಲ್ಲಿ ನಾನು ಅರ್ಥೈಸಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ, ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ. ಆದರೆ ಬಿಜೆಪಿ, ಹೆಣ್ಣುಮಕ್ಕಳಿಗೆ ನಿಜವಾಗಿ ಅಪಮಾನ ಮಾಡಿರುವ ತನ್ನೆಲ್ಲಾ ನಾಯಕರ ಬಳಿ ರಾಜೀನಾಮೆ ಪಡೆದು ರಾಜ್ಯದ ಮಹಿಳಾ ಸಮುದಾಯಕ್ಕೆ ಎಸಗಿದ ಅವಮಾನಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳುವ ಕೆಲಸ ಮಾಡಲಿದೆಯಾ? ಇದಕ್ಕೆ ಸಕಾರಾತ್ಮಕ ರೀತಿಯಲ್ಲಿ ಬಿಜೆಪಿಯಿಂದ ಉತ್ತರವನ್ನು ನಿರೀಕ್ಷಿಸಬಹುದೇ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

Live Tv

Leave a Reply

Your email address will not be published.

Back to top button