ಶನಿವಾರ ಮತ್ತು ಭಾನುವಾರ ಬಿಗ್ ಬಾಸ್ ಮನೆಯಲ್ಲಿ ಇರುವವರಿಗೆ ಒಂದು ರೀತಿಯಲ್ಲಿ ಸಂಭ್ರಮದ ದಿನಗಳು. ಕಿಚ್ಚ ಸುದೀಪ್ ಜೊತೆ ಮಾತನಾಡುವಂತಹ ಅವಕಾಶ ಸಿಗುವುದರಿಂದ, ಪ್ರತಿಯೊಬ್ಬರೂ ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ಕಿಚ್ಚನ ಮಾತು ಕೇಳಿಸಿಕೊಳ್ಳಲು ಮತ್ತು ತಮ್ಮ ನೋವುಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಅವಕಾಶ ಸಿಗುವ ದಿನ ಇದಾಗಿದ್ದರಿಂದ, ಪ್ರತಿಯೊಬ್ಬ ಸ್ಪರ್ಧಿಯೂ ಸಂಭ್ರಮದಿಂದಲೇ ಪಾಲ್ಗೊಳ್ಳುತ್ತಾರೆ.
ಎಂದಿನಂತೆ ಇವತ್ತೂ ಕಿಚ್ಚನ ಪಂಚಾಯಿತಿ ನಡೆದಿದೆ. ವಿಶೇಷ ಅಂದರೆ, ಸಾನ್ಯ ಐಯ್ಯರ್ ಮತ್ತು ರೂಪೇಶ್ ನಡುವಿನ ಮಿಡ್ ನೈಟ್ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರನ್ನು ಕಂಡರೆ ನನಗೆ ಭಯವಾಗುತ್ತದೆ ಎಂದು ಸಾನ್ಯ ಐಯ್ಯರ್ ನೇರವಾಗಿಯೇ ಮಾತನಾಡಿದ್ದಾರೆ. ಪತ್ರಕರ್ತ ಸೋಮಣ್ಣನತ್ತ ಬೆಟ್ಟು ಮಾಡಿ, ಸುಖಾಸುಮ್ಮನೆ ಭಯ ಹುಟ್ಟಿಸುತ್ತಾರೆ ಎಂದು ಆರೋಪಿಸುತ್ತಾರೆ.
ಸಾನ್ಯ ಐಯ್ಯರ್ ಮತ್ತು ರೂಪೇಶ್ ಬಿಗ್ ಬಾಸ್ ಮನೆಯಲ್ಲಿ ಲೈಟ್ ಆಫ್ ಆದ ಮೇಲೆ, ಅದೂ ಮಿಡ್ ನೈಟ್ ನಲ್ಲಿ ಆಚೆ ಹೋಗಿ ಮಾತನಾಡುವಂಥದ್ದು ಏನಿದೆ ಎನ್ನುವ ಪ್ರಶ್ನೆಯನ್ನು ಸೋಮಣ್ಣ ಮಾಡಿದರೆ, ರೂಪೇಶ್ ಕೂಡ ಈ ಮಾತಿಗೆ ಕೌಂಟರ್ ಕೊಟ್ಟಿದ್ದಾರೆ. ಒಂದು ರೀತಿಯಲ್ಲಿ ಸಾನ್ಯ ಐಯ್ಯರ್ ಮತ್ತು ರೂಪೇಶ್ ವಿಚಾರ ಕಿಚ್ಚನ ಪಂಚಾಯಿತಿಯಲ್ಲಿ ಚಕಮಕಿಗೂ ಕಾರಣವಾಗಿದೆ.