– ಗೃಹ ಸಚಿವನಾಗಿ ಆರಗ ಎದುರಿಸಿದ ಸವಾಲುಗಳೇನು..?
– ಹಿಜಬ್ ಪ್ರಕರಣ ನನಗೆ ಚಾಲೆಂಜಿಂಗ್ ಆಗಿತ್ತು
– ಪ್ರತಿ ಘಟನೆಯಲ್ಲೂ ರಾಜೀನಾಮೆಗೆ ಒತ್ತಡ ಕೇಳಿಬಂದಿತ್ತು
ಬೆಂಗಳೂರು: ಇಂದಿಗೆ ನಾನು ಸಚಿವನಾಗಿ 1 ವರ್ಷ ಆಯಿತು. ನನ್ನ ಕೆಲಸ ನನಗೆ ತೃಪ್ತಿ ತಂದಿದೆ. 1 ವರ್ಷದಲ್ಲಿ ನಾನು ಅನೇಕ ಸವಾಲುಗಳನ್ನು ಎದುರಿಸಿದ್ದು, ಪ್ರಾಮಾಣಿಕವಾಗಿಯೇ ಕೆಲಸ ಮಾಡಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸಚಿವರಾಗಿ 1 ವರ್ಷ ಪೂರೈಸಿದ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಹಿಜಬ್ ಪ್ರಕರಣ ನನಗೆ ಅತ್ಯಂತ ಚಾಲೆಂಜಿಂಗ್ ಆಗಿತ್ತು. ಹಗಲು ರಾತ್ರಿ ಎನ್ನದೇ ಈ ಬಗ್ಗೆ ಕೆಲಸ ಮಾಡಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರ ಸಹಕಾರದಿಂದ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಇದರಲ್ಲಿ ಸಿಹಿಯೂ ಇತ್ತು, ಕಹಿಯೂ ಇತ್ತು ಎಂದು ನುಡಿದರು.
- Advertisement
- Advertisement
ಪುನೀತ್ ರಾಜ್‌ಕುಮಾರ್ ನಿಧನರಾದಾಗ ಅತ್ಯಂತ ಯಶಸ್ವಿಯಾಗಿ ಅಂತ್ಯಸಂಸ್ಕಾರ ಕಾರ್ಯ ಮಾಡಿದ್ದೇವೆ. ಕೊಲೆ, ರಕ್ತಪಾತ ಆದಾಗ ಸ್ವಲ್ಪ ನೋವಾಗಿದೆ. ಎಲ್ಲಾ ಸಮಸ್ಯೆಗಳೂ ಈ ವರ್ಷವೇ ಬಂದಂತಿತ್ತು. ಆದರೂ ಎಲ್ಲವನ್ನೂ ನಿಭಾಯಿಸಿ ಯಾವುದನ್ನೂ ಕೈಬಿಡದೇ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಯಾವುದೇ ಘಟನೆಗಳಾದಾಗಲೂ ಹೆಚ್ಚು ಬಾರಿ ನನ್ನ ಸ್ಥಾನಕ್ಕೇ ರಾಜೀನಾಮೆ ನೀಡಲು ಒತ್ತಾಯ ಮಾಡಲಾಗಿತ್ತು. ಏನೇ ತಪ್ಪಾದರೂ ರಾಜೀನಾಮೆಗೆ ಒತ್ತಾಯಿಸುತ್ತಿದ್ದರು. ಆದರೂ ಅಧಿಕಾರಿಗಳನ್ನು ವಿಶ್ವಾಸ ತೆಗೆದುಕೊಂಡು ಕೆಲಸ ಮಾಡಿದ್ದೇನೆ ಎಂದರು. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್‍ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ
ಈ 1 ವರ್ಷದಲ್ಲಿ ಮತಾಂತರ ನಿಷೇಧ ಕಾಯ್ದೆ, ಆನ್‌ಲೈನ್ ಗೇಮ್ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇವೆ. ಕೆಲವರಿಗೆ ಜೈಲು ಎಂದರೆ ಅರಮನೆಯಾಗಿತ್ತು. ಇದಕ್ಕೆ ಒಂದು ಬಿಲ್ ತಂದು ಕ್ರಮ ತೆಗೆದುಕೊಂಡಿದ್ದೇವೆ. ಅಕ್ರಮ ಮಾಡುವವರಿಗೆ ಬಿಗಿಯಾದ ಕಾಯ್ದೆ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
ಇಲಾಖೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಆಗಬೇಕಿದೆ. ಇಲಾಖೆಯನ್ನು ಜನ ಸ್ನೇಹಿಯಾಗಿಸಬೇಕು. ಇಂಟೆಲಿಜೆನ್ಸ್‌ಗೆ ವಿಶೇಷ ನೇಮಕಾತಿ ಮಾಡಬೇಕು. ಅಪರಾಧ ಪ್ರಕರಣದಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಆಗಬೇಕು. ಮಾದಕ ವಸ್ತುಗಳಿಗೆ ನಿಯಂತ್ರಣ ಮಾಡೋಕೆ ಮತ್ತಷ್ಟು ಕೆಲಸ ಆಗಬೇಕು. ಎಫ್‌ಎಸ್‌ಎಲ್ ಲ್ಯಾಬ್ ಯುನಿವರ್ಸಿಟಿ ಮಾಡುವ ಯೋಜನೆಯಿದೆ. ಇದಕ್ಕೆ ಕೇಂದ್ರ ಗೃಹ ಇಲಾಖೆ ಒಪ್ಪಿಗೆ ನೀಡಿದೆ ಎಂದು ಹೇಳಿದರು. ಇದನ್ನೂ ಓದಿ: ಸಚಿವರಾಗಿ ಒಂದು ವರ್ಷ – ಆಂಜನೇಯನ ದರ್ಶನ ಪಡೆದ ಆರಗ