ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಸುಧಾಕರ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಅನುಮಾನಾಸ್ಪದವಾಗಿ ಚಾಕು ಇಟ್ಟುಕೊಂಡಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಉಜ್ವಲ ಭಾರತ ಉಜ್ವಲ ಭವಿಷ್ಯ ಎಂಬ ವಿದ್ಯುತ್ ಮಹೋತ್ಸವ ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿಸಿ ಕಾರು ಹತ್ತಿ ಸಚಿವರು ತೆರಳುವ ವೇಳೆ ಕಾರಿನ ಸುತ್ತಮುತ್ತ ಇದ್ದ ಜನರನ್ನು ಪೊಲೀಸರು ಸರಿಸಿದ್ದಾರೆ.
ಜನರನ್ನು ಪಕ್ಕಕ್ಕೆ ತಳ್ಳುವ ವೇಳೆ ಯುವಕನೊಬ್ಬನ ಸೊಂಟಕ್ಕೆ ಕೈ ಹಾಕಿದ ಪೊಲೀಸ್ ಪೇದೆಗೆ ಆತನ ಬಳಿ ಅನುಮಾನಸ್ಪದ ವಸ್ತು ಇರುವ ಅನುಮಾನ ಬಂದಿದೆ. ಕೂಡಲೇ ಆತನನ್ನು ಎಳೆದು, ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ಯಾರು ಬೇಕಾದ್ರು ಮಾಡ್ತಾರೆ, ಹಿಂದೂ ಸಮಾಜ ಉಳಿಸೋದ್ಯಾರು- ಸರ್ಕಾರಕ್ಕೆ ಬಜರಂಗದಳ ಪ್ರಶ್ನೆ
ಯುವಕನನ್ನು ವಶಕ್ಕೆ ಪಡೆದ ಪೊಲೀಸರು ಪೇರೇಸಂದ್ರರ ಹೊರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆತ ಅದೇ ಬೀಚಗಾನಹಳ್ಳಿ ಗ್ರಾಮದ ಯುವಕ ಗಂಗರಾಜು ಎಂಬುದು ತಿಳಿದುಬಂದಿದೆ. ಆತನಿಗೆ ಗ್ರಾಮದಲ್ಲಿನ ಕೆಲವರೊಂದಿಗೆ ನೀರಿನ ವಿಚಾರದಲ್ಲಿ ಗಲಾಟೆ ಆಗಿದ್ದು, ಅವರು ನನ್ನ ಮೇಲೆ ಯಾವಾಗಲಾದರೂ ದಾಳಿ ಮಾಡುವ ಭಯ, ಆತಂಕ, ಅನುಮಾನ ಇತ್ತು. ಹೀಗಾಗಿ ನನ್ನ ಸುರಕ್ಷತೆಯ ಹಿತದೃಷ್ಠಿಯಿಂದ ಚಾಕು ಇಟ್ಟುಕೊಂಡಿದ್ದೆ ಹೊರತು ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾನೆ.
ನೀರಿನ ವಿಚಾರಕ್ಕೆ ಗಲಾಟೆ ನಡೆದಿರುವ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದ್ದು, ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಫಾಝಿಲ್ ಮನೆಗೆ ಸಿಎಂ ಹೋಗಿಲ್ಲ: ಸಿ.ಎಂ ಇಬ್ರಾಹಿಂ