ನವದೆಹಲಿ: ಪ್ರತಿಯೊಬ್ಬ ಸಂತನಿಗೂ ಭೂತಕಾಲವಿರುವಂತೆ ಪ್ರತಿ ಪಾಪಿಗೂ ಭವಿಷ್ಯವಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.
ಮಧ್ಯಪ್ರದೇಶದಲ್ಲಿ 4 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಕೊಂದಿದ್ದ ವ್ಯಕ್ತಿಯೊಬ್ಬನಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ತಗ್ಗಿಸಿದ್ದ ಸುಪ್ರೀಂ ತೀರ್ಪನ್ನು ಪ್ರಶ್ನಿಸಿ ಮೃತ ಬಾಲಕಿಯ ತಾಯಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಎಲ್ಲ ಸೂಕ್ತ ಅಂಶಗಳನ್ನು ಪರಿಗಣಿಸಿದ ಬಳಿಕವೇ ಅಪರಾಧಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಭಿನ್ನ ದೃಷ್ಟಿಕೋನದಿಂದ ಪ್ರಕರಣವನ್ನು ಪರಿಗಣಿಸುವ ರೀತಿಯಲ್ಲಿ ಯಾವುದೇ ವಾದ ಮಂಡನೆಯಾಗಿಲ್ಲ. ಹೀಗಾಗಿ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಹಾಗೂ ಬೇಲಾ ಎಂ.ತ್ರಿವೇದಿ ಅವರಿದ್ದ ಪೀಠ ತಿಳಿಸಿದೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ದಾಳಿ – 50 ಕೋಟಿ ರೂ., 5 ಕೆ.ಜಿ ಚಿನ್ನ ಪತ್ತೆ
ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಮೊಹಮ್ಮದ್‌ಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಪರಿಶೀಲಿಸುವಂತೆ ಮೃತ ಬಾಲಕಿಯ ತಾಯಿ ಅರ್ಜಿ ಸಲ್ಲಿಸಿದ್ದರು. 2021ರ ಏಪ್ರಿಲ್ 19ರಂದು ನೀಡಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಇದು ಮರಣ ದಂಡನೆ ನೀಡುವಂತಹ ಅಪರೂಪದಲ್ಲೇ ಅಪರೂಪದ ಪ್ರಕರಣವಲ್ಲ ಎಂದು ಹೇಳಿತ್ತು. ಇದನ್ನೂ ಓದಿ: 300 ವರ್ಷಗಳ ನಂತ್ರ ಅಂಗೋಲಾದಲ್ಲಿ ಪಿಂಕ್ ಡೈಮಂಡ್ ಪತ್ತೆ!
ವಿಚಾರಣೆ ವೇಳೆ ಲೇಖಕ ಆಸ್ಕರ್ ವೈಲ್ಡ್‌ನ ಕೆಲ ಸಾಲುಗಳನ್ನು ಉದ್ಗರಿಸಿದ ಸುಪ್ರೀಂ ಕೋರ್ಟ್ `ಸಂತನಿಗೂ ಪಾಪಿಗೂ ಇರುವ ವ್ಯತ್ಯಾಸವೆಂದರೆ ಪ್ರತಿಯೊಬ್ಬ ಸಂತನಿಗೂ ಭೂತಕಾಲವಿದೆ, ಹಾಗೆಯೇ ಪ್ರತಿ ಪಾಪಿಗೂ ಭವಿಷ್ಯವಿದೆ. ಅಪರಾಧಿ ಜೈಲಿನಿಂದ ಬಿಡುಗಡೆಯಾಗಿ ತನ್ನಿಂದಾದ ತಪ್ಪನ್ನು ಸರಿಪಡಿಸಲು ಪ್ರಯತ್ನಿಸುವುದು ಹಾಗೂ ಸಮಾಜಕ್ಕೆ ಉಪಯೋಗವಾಗುವಂತ ಮನುಷ್ಯನಾಗಲು ಒಂದು ಅವಕಾಶ ನೀಡುವುದು ಆಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆರೋಪಿ ಮೊಹಮ್ಮದ್ ಫಿರೋಜ್‌ಗೆ ಸಿಯೋನಿಯಲ್ಲಿನ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಸಂತ್ರಸ್ತ ಬಾಲಕಿಯನ್ನು ಅಪಹರಿಸಿದ್ದ ಸಹ ಆರೋಪಿಗೆ ಜೈಲು ಶಿಕ್ಷೆ ನೀಡಿತ್ತು. ಮಧ್ಯಪ್ರದೇಶ ಹೈಕೋರ್ಟ್ ಗಲ್ಲುಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಇದನ್ನು ಆರೋಪಿ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದ. ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿಯಿತಾದರೂ ಮರಣದಂಡನೆಯನ್ನು ರದ್ದುಗೊಳಿಸಿತ್ತು.