ಬಾಗಲಕೋಟೆ: ಸಿದ್ದರಾಮೋತ್ಸವ ಅದು ಸಿದ್ದರಾಮಯ್ಯರ ಕೊನೆಗಾಲೋತ್ಸವ ಆಗುತ್ತದೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿದ್ದರಾಮೋತ್ಸವದಿಂದ ಬಿಜೆಪಿಗೆ ಹುಮ್ಮಸ್ಸು, ಆತ್ಮಸ್ಥೈರ್ಯ ಬಂದಿದೆ. ಹೊಸ ಅಲೆಯನ್ನು ಸೃಷ್ಟಿ ಮಾಡುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ. ಹೀಗಾಗಿ ಸಿದ್ದರಾಮೋತ್ಸವ ಬಗ್ಗೆ ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಕೊನೆಗಾಲೋತ್ಸವ ಆಗುತ್ತೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಅವಿವಾಹಿತೆಗೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಕಾಂಗ್ರೆಸ್ಸಿನ ತಾಯಿ ಬಂಜೆ: ಕಾಂಗ್ರೆಸ್ ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇದೆ. ರಾಜಾಸ್ಥಾನ ಸೇರಿ ಕೆಲ ಸಣ್ಣಪುಟ್ಟ ರಾಜ್ಯಗಳಲ್ಲಿ ಮಾತ್ರವೇ ಉಳಿದಿದೆ. ಕಾಂಗ್ರೆಸ್ ಬಗ್ಗೆ ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸುತ್ತಾರೆ ಅಂತಾರೆ. ನಾನು ಈ ಮಾತು ಒಪ್ಪಲ್ಲ. ಗರ್ಭಿಣಿ ಆದರೆ ತಾನೆ ಕುಲಾಯಿ ಹೊಲಿಸುವುದು. ಕಾಂಗ್ರೆಸ್ಸಿನ ತಾಯಿ ಬಂಜೆ ಆಗಿದ್ದಾಳೆ. ಆ ತಾಯಿ ಗರ್ಭಿಣಿಯೂ ಆಗಲ್ಲ, ಕೂಸೂ ಹಡಿಯಲ್ಲ… ಹೀಗಾಗಿ ಕುಲಾಯಿ ಹೊಲಿಸುವ ಪ್ರಸಂಗವೂ ಬರಲ್ಲ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲೇ ಸಾಕಷ್ಟು ಅಸಮಾಧಾನ ಇದೆ. ಸಿದ್ದರಾಮಯ್ಯ ಈಗಾಗಲೇ 5 ವರ್ಷ ಮುಖ್ಯಮಂತ್ರಿ ಆಗಿದ್ದಾರೆ. ಅಧಿಕಾರ ಅನುಭವಿಸಿ ಮತ್ತೆ ಸಿಎಂ ಆಗುವುದು ಸರಿಯಲ್ಲ ಅನ್ನೋದು ಕಾಂಗ್ರೆಸ್ ನಾಯಕರ ಅಭಿಪ್ರಾಯ. ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗ್ಬೇಕು ಅಂತಾರೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಯಸ್ಸಾಗಿದೆ. ಒಮ್ಮೆ ಆದ್ರೂ ಸಿಎಂ ಆಗಿ ನಿವೃತ್ತಿ ಆಗ್ಬೇಕು ಅಂತಾ ಇದ್ದಾರೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷನಾಗಿ ಹೆಚ್ಚುಕಾಲ ಸೇವೆ ಮಾಡಿದರೂ ತಮ್ಮನ್ನ ಸೋಲಿದ್ರಲ್ಲಾ ಅನ್ನೋ ಬೇಸರ ಪರಮೇಶ್ವರ್ ಅವರದ್ದು, ಅವರಿಗೂ ಸಿಎಂ ಆಗಬೇಕು ಅನ್ನೋ ಆಸೆ. ಇತ್ತೀಚೆಗೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರೂ ಸಿಎಂ ಆಗಬೇಕು ಅನ್ನುತ್ತಿದ್ದಾರೆ. ಇನ್ನು ಒಂದೆರಡು ತಿಂಗಳಲ್ಲಿ ಕಾಂಗ್ರೆಸ್ ನಲ್ಲಿ 2 ಡಜನ್ ಜನರು ಸಿಎಂ ಆಗಲು ಎದ್ದು ನಿಲ್ಲುವ ಸಂಭವವಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಪ್ರೇಯಸಿ ಕತ್ತು ಹಿಸುಕಿ ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಕೊರತೆಯಿದೆ. ದೋಣಿ ದಡ ಮುಟ್ಟಿಸಲು ಪರಿಣಿತ ನಾವಿಕ ಬೇಕಾಗಿದೆ. ನಾವಿಕನಿಲ್ಲದ ದೋಣಿ ಮುಂದೆ ಬರಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರು ಹಗಲು ಕನಸು ಕಾಣ್ತಿದ್ದಾರೆ. ರಾಜ್ಯದಲ್ಲಿ ಮುಂದಿನ 5 ವರ್ಷ ಬಿಜೆಪಿಯೇ ಆಡಳಿತಕ್ಕೆ ಬರಲಿದೆ. ಮುಖ್ಯಮಂತ್ರಿ ಆದವರು 5 ವರ್ಷ ಉತ್ತಮ ಆಡಳಿತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.