ನವದೆಹಲಿ: ಅಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಕರ್ನಾಟಕ ಮೂಲದ ಪತ್ರಕರ್ತ ಮೊಹಮ್ಮದ್ ಜುಬೇರ್‌ಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಜಾಮೀನು ನೀಡಿದೆ. 50,000 ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಒರ್ವ ಶ್ಯೂರಿಟಿ ಷರತ್ತಿಗೆ ಒಳಪಟ್ಟು ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜುಬೈರ್ ಪರ ವಕೀಲರಾದ ವೃಂದಾ ಗ್ರೋವರ್ ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರ ವಾದವನ್ನು ಆಲಿಸಿದ ನಂತರ ನ್ಯಾಯಾಲಯವು ಗುರುವಾರ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೇವೇಂದ್ರ ಕುಮಾರ್ ಜಂಗಾಲ ಈ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಗರ್ಭಪಾತ ಬೇಡ, ಮಗುವಿಗೆ ಜನ್ಮ ನೀಡಿ ದತ್ತು ಕೊಡಿ – ದೆಹಲಿ ಹೈಕೋರ್ಟ್
ಮೊಹಮ್ಮದ್ ಜುಬೇರ್ ಟ್ವೀಟ್‌ಗಳ ಮೂಲಕ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತುತ್ತಿದ್ದಾರೆ. ಉದ್ದೇಶ ಪೂರ್ವಕವಾಗಿ ಧರ್ಮಗಳು ಮತ್ತು ಧಾರ್ಮಿಕ ಮುಖಂಡರ ವಿರುದ್ಧ ಟ್ವೀಟ್ ಮಾಡಿ ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿದ್ದಾರೆ ಎಂದು ಆರೋಪಿಸಿ ದೆಹಲಿ ಪೊಲೀಸರು ಬಂಧಿಸಿದ್ದರು. ತರುವಾಯ, ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ, 2010 ರ ಸೆಕ್ಷನ್ 35 ಮತ್ತು IPC ಸೆಕ್ಷನ್ 201 (ಸಾಕ್ಷ್ಯ ನಾಶ) ಮತ್ತು 120B (ಅಪರಾಧದ ಪಿತೂರಿ) ಅಡಿಯಲ್ಲಿ ಅಪರಾಧಗಳನ್ನು ಸೇರಿಸಲಾಗಿತ್ತು.
ಈ ಹಿಂದೆ ಪ್ರಕರಣ ವಿಚಾರಣೆ ನಡೆಸಿದ್ದ, ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್, ಜಾಮೀನು ಅರ್ಜಿಯನ್ನು ವಜಾಗೊಳಿಸಿ ಜುಬೈರ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಈ ಆದೇಶವನ್ನು ಪ್ರಶ್ನೆ ಮಾಡಿ ಪಟಿಯಾಲ ಹೌಸ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದನ್ನೂ ಓದಿ: ಸಂಸತ್ ಅಧಿವೇಶನದಲ್ಲಿ ಧರಣಿ ನಡೆಸುವಂತಿಲ್ಲ: ಆದೇಶ ಪ್ರಕಟ
ಹಿಂದೂ ದೇವರನ್ನು ಅವಮಾನಿಸುವ ಉದ್ದೇಶದಿಂದ ಜುಬೈರ್ ಪ್ರಶ್ನಾರ್ಹ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ಹನುಮಾನ್ ಭಕ್ತ್ ಎಂಬ ಟ್ವಿಟ್ಟರ್ ಹ್ಯಾಂಡಲ್‌ನಿಂದ ಜುಬೈರ್ ವಿರುದ್ಧದ ಪ್ರಕರಣವನ್ನು ಆಧರಿಸಿ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಮೊಹಮ್ಮದ್ ಜುಬೇರ್ ಟ್ವೀಟ್ ಮಾಡಿದ ಚಿತ್ರವು 1983 ರ ‘ಕಿಸ್ಸಿ ಸೆ ನಾ ಕೆಹನಾ’ ಚಿತ್ರದ ಸ್ಕ್ರೀನ್‌ಶಾಟ್ ಎಂದು ಅವರ ವಕೀಲರು ವಿಚಾರಣೆ ವೇಳೆ ಸಮರ್ಥಿಸಿಕೊಂಡಿದ್ದರು.
ಜುಬೇರ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಜುಲೈ 8 ರಂದು ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಸೀತಾಪುರ್ ಪೋಲೀಸರು ದೂರು ದಾಖಲಿಸಿಕೊಂಡಿದ್ದರು. ಲಖಿಂಪುರ ಖೇರಿ ಜಿಲ್ಲೆಯಲ್ಲಿ ದಾಖಲಾದ ಮತ್ತೊಂದು ಎಫ್‌ಐಆರ್‌ನಲ್ಲಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.