ರಾಂಚಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಟ್ರೈನಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಐಎಎಸ್ ಅಧಿಕಾರಿಯನ್ನು ಜಾರ್ಖಂಡ್ ಸರ್ಕಾರ ಶುಕ್ರವಾರ ಅಮಾನತುಗೊಳಿಸಿದೆ.
ಲೈಂಗಿಕ ಕಿರುಕುಳ ಆರೋಪದಡಿ ಖುಂಟಿಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಸೈಯದ್ ರಿಯಾಜ್ ಅಹ್ಮದ್ ಅವರನ್ನು ಮಂಗಳವಾರ ಬಂಧಿಸಲಾಯಿತು. ಅಧಿಕಾರಿ ವಿರುದ್ಧ ಇಂಜಿನಿಯರಿಂಗ್ ವಿದ್ಯಾರ್ಥಿನಿಯು ಪೊಲೀಸ್ ದೂರು ದಾಖಲಿಸಿದ ನಂತರ ಎರಡು ವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದನ್ನೂ ಓದಿ: ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಬಾಲಕಿ ವಯಸ್ಕಳಾದ್ರೂ ಪೋಕ್ಸೋ ಅನ್ವಯ: ಹೈಕೋರ್ಟ್
ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಐಎಎಸ್ ಅಧಿಕಾರಿ ಸೈಯದ್ ರಿಯಾಜ್ ಅಹ್ಮದ್ ಅವರನ್ನು ಅಮಾನತುಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ. ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣದ ಆರೋಪ ಹೊರಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಐಪಿಸಿ ಸೆಕ್ಷನ್ 354, ಐಪಿಸಿ ಸೆಕ್ಷನ್ 354A ಮತ್ತು 509 ಅಡಿಯಲ್ಲಿ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜುಲೈ 5 ರಂದು ನ್ಯಾಯಾಲಯವು ಅಧಿಕಾರಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದನ್ನೂ ಓದಿ: ಜಮ್ಮು, ಕಾಶ್ಮೀರದಲ್ಲಿ ಪೊಲೀಸ್ ನೇಮಕಾತಿ ವಂಚನೆ – 1,200 ಮೆರಿಟ್ ಪಟ್ಟಿ ರದ್ದು
ಸಂತ್ರಸ್ತೆ ಸೇರಿದಂತೆ ಐಐಟಿಯ ಎಂಟು ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ತರಬೇತಿಗಾಗಿ ಹೊರ ರಾಜ್ಯದಿಂದ ಖುಂಟಿಗೆ ಬಂದಿದ್ದರು. ಶನಿವಾರ ಉಪ ಅಭಿವೃದ್ಧಿ ಆಯುಕ್ತರ ನಿವಾಸದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಲೈಂಗಿಕ ದೌರ್ಜನ್ಯವಾಗಿರುವ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.