ಬಾಲಿವುಡ್ ನ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಮತ್ತು ಕಂಗನಾ ರಣಾವತ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಾಹಿನಿಯೊಂದರಲ್ಲಿ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಕಂಗನಾ ಮಾತನಾಡಿದ್ದಾರೆ ಎಂದು ಜಾವೇದ್ ಅಖ್ತರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲು ಏರಿತ್ತು. ಹಾಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಕಂಗನಾಗೆ ನೋಟಿಸ್ ಜಾರಿ ಆಗಿತ್ತು.
ಜಾವೇದ್ ಅಖ್ತರ್ ಹೂಡಿರುವ ಮಾನನಷ್ಟ ದಾವೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾದ ಕಂಗನಾ ರಣಾವತ್, ತಮಗೆ ಜಾವೇದ್ ಅಖ್ತರ್ ಅವರಿಂದ ಜೀವ ಬೆದರಿಕೆಯಿದೆ ಎಂದು ಆರೋಪ ಮಾಡಿದ್ದಾರೆ. ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದ ಕಂಗನಾ ‘ಜಾವೇದ್ ಅವರಿಗೆ ನಾನು ಅಪಮಾನ ಮಾಡಿಲ್ಲ. ನನ್ನ ಸಹೋದರಿ ಕೂಡ ಅಂತಹ ಕೆಲಸಕ್ಕೆ ಕೈ ಹಾಕಿಲ್ಲ. ಆದರೂ, ನನ್ನ ವಿರುದ್ಧ ಅವರು ಬೆದರಿಕೆ ಹಾಕಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ
ನ್ಯಾಯಾಲಯಕ್ಕೆ ಹಾಜರಾದ ನಂತರ, ತಮ್ಮ ಹೇಳಿಕೆಯನ್ನು ದಾಖಲಿಸುವಾಗ ತಮ್ಮ ಸಹೋದರಿ ಮತ್ತು ತಮ್ಮ ವಕೀಲರು ಮಾತ್ರ ಇರಬೇಕು ಎಂದು ಮನವಿ ಮಾಡಿದರು ಕಂಗನಾ ರಣಾವತ್. ಅದಕ್ಕೆ ನ್ಯಾಯಾಲಯವು ಪುರಸ್ಕರಿಸಿತು. ನ್ಯಾಯಾಲಯದ ಮುಂದೆ ಗಂಭೀರ ಆರೋಪವನ್ನೂ ಮಾಡಿರುವ ಕಂಗನಾ ‘ಜಾವೇದ್ ಅವರ ಮಾತು ನನ್ನನ್ನು ಆತ್ಮಹತ್ಯೆಗೆ ಪ್ರಚೋದಿಸಿದೆ ಎಂದೂ ಹೇಳಿದ್ದಾರೆ. ಜಾವೇದ್ ಮತ್ತು ಕಂಗನಾ ನಡುವಿನ ವಾಗ್ವಾದವನ್ನೂ ಅವರು ಹೇಳಿಕೊಂಡಿದ್ದಾರೆ.