ಬೆಂಗಳೂರು: ಪಠ್ಯ ಪುಸ್ತಕಗಳ ಪರಿಷ್ಕರಣೆ ಸಂಬಂಧ ಹಲವಾರು ಗೊಂದಲಗಳಿಗೆ ತೆರೆ ಎಳೆದಿದ್ದ ಸಚಿವ ಬಿ.ಸಿ.ನಾಗೇಶ್ ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಸಾಹಿತಿ ಹಾಗೂ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಮಾಜಿ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ ಅವರು ಸುದೀರ್ಘ ಪತ್ರದ ಮೂಲಕ ಸ್ಪಷ್ಟ ಉತ್ತರ ನೀಡಿದ್ದಾರೆ.
ಪತ್ರದಲ್ಲಿ ಏನಿದೆ?: ನನ್ನ ಸಭಾಧ್ಯಕ್ಷತೆಯಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆದಾಗ ಕುವೆಂಪು, ಗಾಂಧಿ, ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಮದಕರಿ ನಾಯಕ, ಕೆಂಪೇಗೌಡರ ಪಠ್ಯ ವಿಷಯಗಳನ್ನು ಕೈಬಿಟ್ಟಿರುವುದಾಗಿ ಮಾನ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ. ಇಷ್ಟಕ್ಕೂ ಎಲ್ಲ ಪಠ್ಯಪುಸ್ತಕಗಳನ್ನು ನಾನೊಬ್ಬನೇ ಬರೆದಂತೆ ಬಿಂಬಿಸಿ ವೈಯಕ್ತಿಕ ಟೀಕೆ ಮಾಡಲಾಗುತ್ತಿದೆ.
ಸಚಿವರು ಹೇಳಿರುವುದು ಅಪ್ಪಟ ತಪ್ಪು ಮಾಹಿತಿ, ಕುವೆಂಪು ಅವರ ರಚನೆಗಳು 10 ಮತ್ತು 7ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳಲ್ಲಿ ಇವೆ. ಖಂಡಿತಾ ಕೈ ಬಿಟ್ಟಿಲ್ಲ. ಪ್ರೌಢಶಾಲೆ ಹಂತದಲ್ಲಿ ಇದ್ದ ಕುವೆಂಪು ಅವರ `ಭರತ ಭೂಮಿ ನಮ್ಮ ತಾಯಿ’ ಎಂಬ ಪದ್ಯವನ್ನು ಚಿಕ್ಕಂದಿನಲ್ಲೇ ದೇಶಪ್ರೇಮದ ಭಾವನೆ ಬೆಳೆಯಲಿ ಎಂಬ ದೃಷ್ಟಿಯಿಂದ 7ನೇ ತರಗತಿಗೆ ಅಳವಡಿಸಲು ನಾವು ಸೂಚಿಸಿದ್ದೆವು ಅಷ್ಟೇ. ಇದನ್ನೂ ಓದಿ: ತನ್ನ ಕಥೆಯನ್ನು ಪಠ್ಯದಿಂದ ಕೈ ಬಿಡಿ: ದೇವನೂರು ಮಹಾದೇವ
7ನೇ ತರಗತಿ ಮತ್ತು 10ನೇ ತರಗತಿಯ 2ನೇ ಭಾಗದ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಗಾಂಧಿಯವರನ್ನು ಕುರಿತ ಸಾಕಷ್ಟು ವಿವರಗಳಿವೆ. ಸಮಾಜ ವಿಜ್ಞಾನದ 8ನೇ ತರಗತಿಯ ಭಾಗ-1 ಮತ್ತು 10ನೇ ತರಗತಿಯ ಭಾಗ-2ರಲ್ಲಿ ಡಾ.ಅಂಬೇಡ್ಕರ್ ಪಾಠಗಳಿವೆ. 9ನೇ ತರಗತಿಯ ಪಠ್ಯದಲ್ಲಿ `ನಮ್ಮ ಸಂವಿಧಾನ’ ಎಂಬ ಪಾಠವಿದ್ದು ಅಲ್ಲಿಯೂ ಡಾ.ಅಂಬೇಡ್ಕರ್ ಕುರಿತ ವಿವರಗಳಿವೆ. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಸಮಾಜ ವಿಜ್ಞಾನದ 6ನೇ ತರಗತಿಯ ಭಾಗ-2 ಮತ್ತು 10ನೇ ತರಗತಿಯ ಭಾಗ-1ರಲ್ಲಿ ಪಾಠಗಳಿವೆ. ಜೊತೆಗೆ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ 5ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಹೊಸದಾಗಿ ಒಂದು ಪಾಠವನ್ನೂ ಸೇರಿಸಲಾಗಿದೆ.
ಮದಕರಿ ನಾಯಕರ ಬಗ್ಗೆ ಪಾಠವನ್ನು ಕೈಬಿಟ್ಟಿಲ್ಲ. ಮದಕರಿ ನಾಯಕರ ಜೊತೆಗೆ ಸುರಪುರ ಸಂಸ್ಥಾನದ ಬಗ್ಗೆಯೂ ಬರೆಸಿ ಸೇರಿಸಲಾಗಿದೆ. ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಬಗ್ಗೆ ವಿವರಗಳಿಲ್ಲ ಎನ್ನುವುದು ಕೂಡ ತಪ್ಪು ಮಾಹಿತಿ, ಯಲಹಂಕ ನಾಡಪ್ರಭುಗಳ ಬಗ್ಗೆ ಪ್ರತ್ಯೇಕ ವಿವರಗಳಿದ್ದು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬಗ್ಗೆ ಪ್ರತ್ಯೇಕ ಮಾಹಿತಿ ನೀಡಲಾಗಿದೆ. ಇದಿಷ್ಟು ಪಾಠಗಳು ಸಮಾಜ ವಿಜ್ಞಾನದ 7ನೇ ತರಗತಿಯ ಭಾಗ-1ನೇ ಪಠ್ಯಪುಸ್ತಕದಲ್ಲಿವೆ.
7ನೇ ತರಗತಿಯ ಭಾಗ-2ರ ಸಮಾಜ ವಿಜ್ಞಾನ ಪಠ್ಯದಲ್ಲಿ ರಾಣಿ ಅಬ್ಬಕ್ಕ ಕುರಿತ ವಿವರಗಳಿವೆ. 7ನೇ ತರಗತಿಯ ಭಾಗ-1ರ ಸಮಾಜ ವಿಜ್ಞಾನ ಪಠ್ಯದಲ್ಲಿ `ಮೈಸೂರು ಒಡೆಯರು’ ಎಂಬ ಪ್ರತ್ಯೇಕ ಅಧ್ಯಾಯವೇ ಇದೆ. ಸಚಿವರು ಹೇಳಿದಂತೆ ಇಲ್ಲಿನ ವಿವರಗಳು ಕಡಿಮೆ ಎನ್ನಿಸಿದರೆ `ಮರುಪರಿಷ್ಕರಣೆ’ಯಲ್ಲಿ ವಿಸ್ತರಿಸಬಹುದಿತ್ತಲ್ಲ? ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ
ಟಿಪ್ಪುವನ್ನೂ ಒಳಗೊಂಡಂತೆ ಯಾರ ಬಗ್ಗೆಯೂ ನಮ್ಮ ಸಮಾಜ ವಿಜ್ಞಾನ ಪಠ್ಯಪುಸ್ತಕ ಸಮಿತಿಯವರು ಆಧಾರವಿಲ್ಲದೆ ಏನನ್ನೂ ಸೇರಿಸಿಲ್ಲ. ಟಿಪ್ಪು, ಸಾವರ್ಕರ್ ಒಳಗೊಂಡಂತೆ ಯಾರ ಬಗ್ಗೆಯೂ ನಕಾರಾತ್ಮಕ ವಿಷಯಗಳನ್ನು ಹೇಳದೆ ನಡೆದ ಘಟನೆಗಳ ವಾಸ್ತವದ ಮಾಹಿತಿಯನ್ನಷ್ಟೇ ಕೊಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದ ಮಕ್ಕಳಿಗೆ ಪರ ಮತ್ತು ವಿರೋಧದ ಚರ್ಚೆಗಳ ಬದಲು ಮಾಹಿತಿ ಒದಗಿಸುವ ಉದ್ದೇಶವೇ ಮುಖ್ಯವೆಂದು ಭಾವಿಸಲಾಗಿದೆ.
ವಾಸ್ತವವಾಗಿ ಆಗ 27 ಸಮಿತಿಗಳಿದ್ದವು. 172 ಜನ ತಜ್ಞರು, ಅಧ್ಯಾಪಕರು ಈ ಸಮಿತಿಗಳಲ್ಲಿದ್ದರು. 27 ಸಮಿತಿಗಳಿಗೂ ಒಬ್ಬೊಬ್ಬರು ಅಧ್ಯಕ್ಷರಿದ್ದರು. ಈ ಸಮಿತಿಗಳಾಚೆಗೂ ನಾವು ಅಧ್ಯಾಪಕರ ಸಂಘಗಳ ಜೊತೆ, ಡಯಟ್ ಪ್ರಾಂಶುಪಾಲರು, ವಿಷಯ ಪರೀಕ್ಷಕರು ಮತ್ತು ಎಲ್ಲ ಪಠ್ಯವಿಷಯ ಪರಿಣಿತರ ಜೊತೆ ಮೂವತ್ತಕ್ಕೂ ಹೆಚ್ಚು ಸಮಾಲೋಚನೆ ಸಭೆ ನಡೆಸಿ ಸಲಹೆ ಪಡೆದಿದ್ದೇನೆ. ಆನಂತರವೇ ಪರಿಷ್ಕರಣೆ ಮಾಡಲಾಗಿದೆ. ಇಷ್ಟಾಗಿಯೂ ಮಾಹಿತಿ ಕೊರತೆ ಮತ್ತು ದೋಷಗಳು ಉಳಿದಿದ್ದರೆ, ಮುಂದೆ ಪರಿಷ್ಕರಿಸಬಹುದೆಂದು ಮೊದಲಿನಿಂದಲೂ ನಾನು ಹೇಳುತ್ತಾ ಬಂದಿದ್ದೇನೆ.
ಆದರೆ, ನಮಗಿಂತ ಹಿಂದೆ ಪಠ್ಯಪುಸ್ತಕ ರಚನೆ ಮಾಡಿದವರ ಬಗ್ಗೆ ಒಂದೇ ಒಂದು ಟೀಕೆಯನ್ನೂ ಮಾಡಿಲ್ಲ. ವೈಯಕ್ತಿಕ ನಿಂದನೆ ಮಾಡುವುದನ್ನು ನನಗೆ ಕಲಿಸಿಲ್ಲ. ಮಾನ್ಯ ಸಚಿವರು ವಾದಕ್ಕೆ ಇಳಿಯುವ ಬದಲು ವಿವಾದವನ್ನು ಬಗೆಹರಿಸಿ ಶೈಕ್ಷಣಿಕ ಕ್ಷೇತ್ರದ ಘನತೆ ಕಾಪಾಡಲಿ.