ಬೆಂಗಳೂರು: ಉತ್ತರಪ್ರದೇಶ, ಮಧ್ಯಪ್ರದೇಶ ಮಾದರಿಯ ಬುಲ್ಡೋಜರ್ ಕ್ರಮ ರಾಜ್ಯದಲ್ಲೂ ಅಗತ್ಯಬಿದ್ದರೆ ಹೊಸ ಕಾನೂನಿನ ಮೂಲಕ ಜಾರಿಗೆ ತರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸರ್ಕಾರಕ್ಕೆ ಆಗ್ರಹಿಸಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಇವತ್ತು ರಾಜಕೀಯಪ್ರೇರಿತ ಗಲಭೆಗಳು ಜಾಸ್ತಿಯಾಗ್ತಿವೆ. ಇವುಗಳ ನಿಯಂತ್ರಣ ಅನಿವಾರ್ಯ. ಹೀಗಾಗಿ ಕಾನೂನು ತಂದು ಬುಲ್ಡೋಜರ್ ಕ್ರಮ ಜಾರಿಗೆ ತರಬಹುದು. ದಂಗೆಕೋರರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕು. ಗುಜರಾತ್, ಉತ್ತರ ಪ್ರದೇಶ, ಮದ್ಯಪ್ರದೇಶಗಳಲ್ಲಿ ಗಲಭೆ ನಿಯಂತ್ರಣಕ್ಕೆ ಕಠಿಣ ಕಾನೂನುಗಳಿವೆ. ಇದರಲ್ಲಿ ಯಾವುದೇ ಜಾತಿ ಮತ ಪಂಥಗಳ ಭೇದ ಇಲ್ಲ. ಇನ್ನೊಂದು ವರ್ಷ ಇಂಥ ಗಲಭೆಗಳನ್ನು ಸೃಷ್ಟಿ ಮಾಡ್ತಾರೆ. ಇದರ ವಿರುದ್ಧ ಕಠೋರ ಕಾನೂನುಗಳು ಬೇಕು. ಸಮಾಜದ ಆಸ್ತಿ ನಾಶ, ಸರ್ಕಾರಿ ಕಚೇರಿಗೆ, ಪೊಲೀಸ್ ಠಾಣೆಗೆ ಬೆಂಕಿ ಹಾಕುವುದು, ಪೊಲೀಸರ, ಸಮಾಜದ ಸ್ಥೈರ್ಯ ಕುಂದಿಸುವ ಕೆಲಸಗಳೆಲ್ಲ ಭಯೋತ್ಪಾದನೆಗೆ ಸಮ. ಅಂತಹ ವಿಚಾರಗಳಲ್ಲಿ ಸರ್ಕಾರ ಕಠಿಣ ತೀರ್ಮಾನ ತೆಗೆದುಕೊಳ್ಳಬೇಕು. ದಂಗೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಂಡರೂ ತಪ್ಪಿಲ್ಲ. ಇದನ್ನು ಸರ್ಕಾರಕ್ಕೆ ಬಿಜೆಪಿ ಪಕ್ಷ ಒತ್ತಾಯಿಸುತ್ತದೆ ಎಂದರು. ಇದನ್ನೂ ಓದಿ: ಕರ್ನಾಟಕದಲ್ಲಿ ಶಾಂತಿ ದೃಷ್ಟಿಯಿಂದ ಬುಲ್ಡೋಜರ್ ಕ್ರಮ ಅವಶ್ಯ: ಮುತಾಲಿಕ್
ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿ 150 ಪ್ಲಸ್ ಶಾಸಕ ಸ್ಥಾನ ಪಡೆಯಲು ಕಾರ್ಯತಂತ್ರ ರೂಪಿಸಲಾಗಿದೆ. ಮೂರು ತಂಡಗಳಲ್ಲಿ ಪಕ್ಷದ ಸಂಘಟನೆಗಾಗಿ ಪ್ರವಾಸವೂ ನಡೆಯುತ್ತಿದೆ ಎಂದು ಮಾಹಿತಿ ಹಂಚಿಕೊಂಡರು. ರಾಜ್ಯ ಪ್ರವಾಸದ ವೇಳೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರದ ಸಾಧನೆಯ ಕುರಿತು ಜನರಿಗೆ ತಲುಪಿಸುವ ದೃಷ್ಟಿಯಿಂದ ರಾಜ್ಯ ಮಟ್ಟದಿಂದ ಬೂತ್ ಮಟ್ಟದ ವರೆಗೆ ಸಭೆಗಳನ್ನು ನಡೆಸಲಾಗಿದೆ. ನಮ್ಮ ಸಂಘಟನೆಯನ್ನು ಸರ್ವಸ್ಪರ್ಶಿ-ಸರ್ವವ್ಯಾಪಿ ಮಾಡಲು ಶ್ರಮಿಸುತ್ತಿದ್ದೇವೆ. ಬೂತ್ ಕಮಿಟಿ, ಪೇಜ್ ಕಮಿಟಿ ಹೆಚ್ಚು ಸದೃಢಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಒಂದು ಮಂಡಲದಿಂದ ಇನ್ನೊಂದು ಮಂಡಲಕ್ಕೆ ತೆರಳಿ ಪೇಜ್ ಕಮಿಟಿ ಕಾರ್ಯದ ಪರಿಶೀಲನೆ ನಡೆದಿದೆ. ಬೂತ್ ಅಧ್ಯಕ್ಷರ ನಾಮಫಲಕ ಜೋಡಣೆ ದೇಶದಲ್ಲೇ ಮೊದಲ ಬಾರಿಗೆ ನಡೆದಿದ್ದು, ಶೇ.90ರಷ್ಟು ಕಾರ್ಯ ಮುಕ್ತಾಯವಾಗಿದೆ. ಪಕ್ಷದ ಸ್ಥಿತಿಗತಿಯ ಅವಲೋಕನವೂ ನಡೆಯುತ್ತಿದೆ. ಹೊಸಪೇಟೆ ಕಾರ್ಯಕಾರಿಣಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್ ಅವರು ಪಾಲ್ಗೊಂಡು ಮಾರ್ಗದರ್ಶನ ನೀಡಿದ ಕುರಿತು ವಿವರಿಸಿ. ಕಾರ್ಯಕಾರಿಣಿ ಯಶಸ್ವಿಯಾಗಿದೆ. ಸರ್ಕಾರದ ಹತ್ತಾರು ಸಾಧನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಲಾಗಿದೆ ಎಂದು ನುಡಿದರು. ಇದನ್ನೂ ಓದಿ: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಕೊಟ್ಟರೆ ಬೇಡ ಅನ್ನಲ್ಲ: ಎನ್.ಮಹೇಶ್
ಕಾಂಗ್ರೆಸ್ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ. ಹಾಸನ, ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಕುರಿತು ಚರ್ಚಿಸಲಾಗಿದೆ. ಕಾಂಗ್ರೆಸ್ ಕಾಲೆಳೆಯುವ, ರಾಜ್ಯದ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಗಲಭೆ ಮೂಲಕ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಮತೀಯವಾದದ ಹೆಸರಿನಲ್ಲಿ ಬೆಂಕಿ ಹಾಕುವ ಕೆಲಸವನ್ನು ಮಾಡುತ್ತಿದೆ. ಅಧಿಕಾರ ಪಡೆಯಲು ಅರಾಜಕತೆ ಸೃಷ್ಟಿಸುವ ಪ್ರವೃತ್ತಿ ಕಾಂಗ್ರೆಸ್ ಪಕ್ಷದ್ದು, ಡಿಜೆ.ಹಳ್ಳಿ, ಕೆಜಿ.ಹಳ್ಳಿ ಪ್ರಕರಣ, ಹರ್ಷ ಕೊಲೆ ಪ್ರಕರಣ, ಹುಬ್ಬಳ್ಳಿ ಹಿಂಸಾಚಾರದ ಘಟನೆ ಇದಕ್ಕೆ ಉದಾಹರಣೆ ಎಂದು ತಿಳಿಸಿದರು. ಇದನ್ನೂ ಓದಿ: ತೇಜಸ್ವಿ ಸೂರ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಮಹಿಳಾಮಣಿಗಳು
ಭಿಂದ್ರನ್‍ವಾಲೆ, ದಾವೂದ್ ಇಬ್ರಾಹಿಂಗೆ ಬೆಂಬಲ ಕೊಡುವ ಮೂಲಕ ಕಾಂಗ್ರೆಸ್ ಪಕ್ಷವು ಭಯೋತ್ಪಾದನೆಗೆ ಪ್ರೇರಣೆ ಮತ್ತು ಭ್ರಷ್ಟಾಚಾರಕ್ಕೂ ಪ್ರೇರಣೆ ನೀಡಿದೆ ಎಂದು ಟೀಕಿಸಿದ ಅವರು, ಅರಾಜಕತೆ ಸೃಷ್ಟಿಸಿ ಅಧಿಕಾರ ಪಡೆಯಲು ಹವಣಿಸುತ್ತಿದೆ. ಜೀಪ್ ಹಗರಣ, ನೆಹರೂವಿನಿಂದ ಹಿಡಿದು ಮನಮೋಹನ್ ಸಿಂಗ್ ವರೆಗೆ ಎಲ್ಲರ ಅಧಿಕಾರದ ಸಂದರ್ಭದಲ್ಲೂ ಒಟ್ಟು 4 ಲಕ್ಷ ಕೋಟಿಗಿಂತ ಹೆಚ್ಚು ಮೊತ್ತದ ಭ್ರಷ್ಟಾಚಾರ ಹಗರಣಗಳು ನಡೆದಿದೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಗಂಗೋತ್ರಿ ಎಂಬಂತಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕಾಲ ಹೊರತುಪಡಿಸಿ ಇತರ ಎಲ್ಲ ಕಾಂಗ್ರೆಸ್ ಪ್ರಧಾನಿಗಳ ಅವಧಿಯಲ್ಲಿ ಒಂದಲ್ಲೊಂದು ಭ್ರಷ್ಟಾಚಾರ ಪ್ರಕರಣಗಳು ನಡೆದಿವೆ. ಕಾಂಗ್ರೆಸ್ ಮುಕ್ತ ಭಾರತ ಎಂದರೆ ಭ್ರಷ್ಟಾಚಾರದಿಂದ ಮುಕ್ತಿ ಎಂಬ ಅರ್ಥದಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿಯವರು ತಿಳಿಸಿದ್ದಾರೆ ಎಂದರು.
ಪಿಎಎಸ್‍ಐ ಹಗರಣದಡಿ ಯಾವುದೇ ಪಕ್ಷದವರಾದರೂ ಬಂಧನ ನಡೆಯುತ್ತಿದೆ. ರಾಜ್ಯದ ಗೃಹ ಸಚಿವರು ರಾಜೀನಾಮೆ ಕೊಡಬೇಕೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಮತ್ತು ರಾಹುಲ್ ಕಾಂಗ್ರೆಸ್ ಬಿಟ್ಟು ಹೊರಬರಲಿ. ಆಗ ಆ ಪಕ್ಷಕ್ಕೆ ಒಳಿತಾದೀತು ಎಂದು ವ್ಯಂಗ್ಯವಾಗಿ ಉತ್ತರ ನೀಡಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ರಾಜ್ಯದ ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್, ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ, ಶಾಸಕರಾದ ಉದಯ್ ಗರುಡಾಚಾರ್, ಎಲ್. ರವಿಸುಬ್ರಹ್ಮಣ್ಯ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಎನ್.ಆರ್. ರಮೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.