ಶಿವಮೊಗ್ಗ: ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಯಾರು, ಯಾರೂ ಕಾರಣರಾಗಿದ್ದಾರೋ, ಬಹುತೇಕ ಎಲ್ಲರ ಬಂಧನವಾಗಿದೆ. ಯಾವ ಕಾರಣಕ್ಕಾಗಿ ಈ ರೀತಿಯ ಗಲಭೆ ಆಗಿದೆ ಎಂಬುದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ, ಪೊಲೀಸ್ ವಾಹನಗಳ ಜಖಂಗೊಳಿಸಿದ್ದಾರೆ ಅಂದರೆ ಗೂಂಡಾ ಪ್ರವೃತ್ತಿ ಯಾವ ಮಟ್ಟಕ್ಕೆ ಇದೆ ಎನ್ನುವುದು ತಾಜಾ ಉದಾಹರಣೆ. ನಮ್ಮ ರಕ್ಷಣೆ ಮಾಡುವ ಪೊಲೀಸರ ಮೇಲೆ ಕೈ ಮಾಡುವುದು, ಠಾಣೆಗೆ ನುಗ್ಗುವ ಪ್ರಯತ್ನ ಮಾಡುವುದು ಅಕ್ಷಮ್ಯ ಅಪರಾಧ ಎಂದರು. ಇದನ್ನೂ ಓದಿ: ಯೋಗಿ ತರಹ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ.. : ಪ್ರಮೋದ್ ಮುತಾಲಿಕ್
ಕೋಮು ಸೌಹಾರ್ದತೆ ಹಾಳು ಮಾಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರ ಮೇಲೆ ಉಗ್ರವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. ಮುಖ್ಯಮಂತ್ರಿ ಅವರು ಸಹ ಈ ಬಗ್ಗೆ ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಮುಂದೆ ಇಂತಹ ಘಟನೆ ಮರುಕಳಿಸಬಾರದು. ಆ ರೀತಿಯ ಬಿಗಿ ಕ್ರಮ ಕೈಗೊಂಡು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದರು. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್ ಆಡಿಯೋ