ಮೈಸೂರು: ನಕಲಿ ಡೆತ್ ನೋಟ್ ಇಟ್ಟುಕೊಂಡು ಗೊಡ್ಡು ಬೆದರಿಕೆ ಹಾಕಿದರೆ ನಾನು ಹೆದರಲ್ಲ ಎಂದು ಗ್ರಾಮೀಣಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಕ್ಕಿರುವ ಡೆತ್ ನೋಟ್ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಂತೋಷ್ ಡೆತ್ ನೋಟ್ ನಕಲಿ. ಸಂತೋಷ್ ಆತ್ಮಹತ್ಯೆಯಾದ ಬಳಿ ಸೃಷ್ಟಿಯಾದ ಡೆತ್ ನೋಟ್ ಇದಾಗಿದ್ದು, ಸಂತೋಷ್ ತನ್ನ ಕೈ ಬರಹದಲ್ಲಿ ಡೆತ್ ನೋಟ್ ಬರೆದಿದ್ದರೆ ಅದಕ್ಕೆ ಒಂಚೂರು ಬೆಲೆ ಇರುತ್ತಿತ್ತು. ಯಾರೋ ವಾಟ್ಸಾಪ್‍ನಲ್ಲಿ ಸೃಷ್ಟಿಸಿದ ಡೆತ್ ನೋಟ್‍ಗೆ ಬೆಲೆಯೇ ಇಲ್ಲ. ಇಂತಹ ನಕಲಿ ಡೆತ್ ನೋಟ್ ಇಟ್ಟುಕೊಂಡು ಗೊಡ್ಡು ಬೆದರಿಕೆ ಹಾಕಿದರೆ ನಾನು ಹೆದರಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪರ್ಸೆಂಟೇಜ್ ಕೊಡದಿದ್ದರೆ ಗುದ್ದಲಿ ಪೂಜೆನೂ ಮಾಡಲ್ಲ: ಸಿದ್ದಣ್ಣ ಶೇಗಜಿ
ನನ್ನ ಹಿಂದೆ ಇಡೀ ಬಿಜೆಪಿ ಇದೆ. ಇವತ್ತು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುತ್ತೇನೆ. ಸಿಎಂ ರಾಜೀನಾಮೆ ಕೇಳಿದರೆ ತಕ್ಷಣ ಕೊಡುತ್ತೇನೆ ಎಂದರು. ಇದೇ ವೇಳೆ ಗಣಪತಿ ಕೇಸ್‍ಗೂ ಈ ಕೇಸ್‍ಗೂ ಸಂಬಂಧ ಇಲ್ಲ. ಗಣಪತಿ ಕೇಸ್‍ನಲ್ಲಿ ಮೃತ ದೇಹದ ಬಳಿಯೇ ಡೆತ್ ನೋಟ್ ಪತ್ತೆಯಾಗಿತ್ತು. ಇದರಲ್ಲಿ ಡೆತ್ ನೋಟ್ ಇಲ್ಲ. ಈ ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿದೆ. ಸಂತೋಷ್ ತಾನು ಬಡವ ಎಂದು ಹೇಳಿದ್ದಾರೆ. ಹಾಗಾದರೆ ಅವರನ್ನು ದೆಹಲಿಗೆ ಕಳಿಸಿದ್ದು ಯಾರು? ಅವರಿಗೆ ಅಷ್ಟೆಲ್ಲಾ ವಂಚನೆ ಮಾಡಿದ್ದು ಯಾರು? ಈ ಬಗ್ಗೆಯೂ ತನಿಖೆ ಆಗಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ಮುಜುಗರ ತರಿಸಲ್ಲ, ರಾಜೀನಾಮೆ ಕೊಡ್ತೀನಿ: ಈಶ್ವರಪ್ಪ