ಮಾನವೀಯತೆ ಇರುವುದು ನಿಜವೇ? – ಸಿಎಂ ಕೇಜ್ರಿವಾಲ್‌ಗೆ ಅಗ್ನಿಹೋತ್ರಿ ಪ್ರಶ್ನೆ

Public TV
2 Min Read
VIVEK AGNIHOTRI

ನವದೆಹಲಿ: `ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಕೇಳುತ್ತಿದ್ದಾರೆ. ನಿರ್ದೇಶಕರು ಸಿನಿಮಾವನ್ನು ಯೂಟ್ಯೂಬ್‌ಗೆ ನೀಡಲಿ. ಉಚಿತವಾಗಿ ಸಿನಿಮಾ ನೋಡಬಹುದು ಎಂದು ಚಾಟಿ ಬೀಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹೇಳಿಕೆಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾಡಿರುವ ಟ್ವೀಟ್ ಒಂದನ್ನು ತಮ್ಮ ಖಾತೆಯಲ್ಲಿ ರಿಟ್ವೀಟ್ ಮಾಡುವ ಮೂಲಕ ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತಗಳನ್ನೂ ಪ್ರಶ್ನಿಸಿದ್ದಾರೆ. ಅರವಿಂದ ಕೇಜ್ರಿವಾಲ್ ಅವರು ಕಠಿಣ ದೇಶಭಕ್ತಿ, ಪ್ರಾಮಾಣಿಕತೆ, ಮಾನವೀಯತೆ ಆಮ್ ಆದ್ಮಿ ಪಕ್ಷದ ಸಿದ್ಧಾಂತದ ಆಧಾರ ಸ್ತಂಭಗಳು ಎಂದು ಕೆಲದಿನಗಳ ಹಿಂದೆಯಷ್ಟೇ ಟ್ವೀಟ್ ಮಾಡಿದ್ದರು. ಇದಕ್ಕೆ ಟಾಂಗ್ ನೀಡಿರುವ ಅಗ್ನಿಹೋತ್ರಿ ಅವರು ಮಾನವೀಯತೆ ಇರುವುದು ನಿಜವೇ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬೇಕಿದ್ರೆ ʻದಿ ಕಾಶ್ಮೀರ್‌ ಫೈಲ್ಸ್‌ʼನ್ನು ಯೂಟ್ಯೂಬ್‌ಗೆ ಹಾಕಲಿ: ತೆರಿಗೆ ವಿನಾಯಿತಿ ಕೇಳಿದ ಬಿಜೆಪಿಗೆ ಕೇಜ್ರಿವಾಲ್‌ ಟಾಂಗ್

kashmir

ನಟ ಅನುಪಮ್ ಖೇರ್ ಕೂಡ ಕೇಜ್ರಿವಾಲ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಜ್ರಿವಾಲ್ ಹೇಳಿಕೆಯ ನಂತರ, ಪ್ರತಿಯೊಬ್ಬ ನಿಜವಾದ ಭಾರತೀಯರು ಈ ಚಿತ್ರವನ್ನು ಥಿಯೇಟರ್‌ಗೇ ಹೋಗಿ ನೋಡಬೇಕು ಎಂದು ನಾನು ಭಾವಿಸುತ್ತೇನೆ. ಈಗಾಗಲೇ ಸಿನಿಮಾ ಕಾಶ್ಮೀರದಿಂದ ಹೆಚ್ಚಿನ ಜನರೊಂದಿಗೆ ಸಂಪರ್ಕ ಸಾಧಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ʼದಿ ಕಾಶ್ಮೀರ್‌ ಫೈಲ್ಸ್‌ʼ ನೋಡಿ, ಆದ್ರೆ ಮುಸ್ಲಿಮರನ್ನು ದ್ವೇಷಿಸಬೇಡಿ: ಮೆಹಬೂಬಾ ಮುಫ್ತಿ

ಈಚೆಗಷ್ಟೇ ವಿಧಾನ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು, ನಿರ್ದೇಶಕರು ಸಿನಿಮಾವನ್ನು ಯೂಟ್ಯೂಬ್‌ಗೆ ನೀಡಲಿ. ಉಚಿತವಾಗಿ ಸಿನಿಮಾ ನೋಡಬಹುದು. ನಮ್ಮನ್ನು ತೆರಿಗೆ ಮುಕ್ತ ಮಾಡಿ ಎಂದು ಏಕೆ ಕೇಳುತ್ತಿದ್ದೀರಿ? ಅಷ್ಟು ಉತ್ಸುಕರಾಗಿದ್ದರೆ ವಿವೇಕ್ ಅಗ್ನಿಹೋತ್ರಿಯವರಿಗೆ ಯೂಟ್ಯೂಬ್‌ನಲ್ಲಿ ಹಾಕಲು ಹೇಳಿ, ಎಲ್ಲಾ ಉಚಿತವಾಗಿರುತ್ತದೆ. ಎಲ್ಲರೂ ಅದನ್ನು ಒಂದು ದಿನದಲ್ಲಿ ನೋಡಬಹುದು. ಆಗ ತೆರಿಗೆ ಮುಕ್ತ ಮಾಡುವ ಅಗತ್ಯವಾದರೂ ಏಕೆ ಬರುತ್ತದೆ? ಎಂದು ಪ್ರಶ್ನಿಸಿದ್ದರು.

ಕೇಜ್ರಿವಾಲ್ ಅವರು ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಮಾತನಾಡುವಾಗ ನಗುತ್ತಿದ್ದರು ಮತ್ತು ಆ ಮೂಲಕ ಕಾಶ್ಮೀರಿ ಪಂಡಿತರ ನೋವನ್ನು ಅವಮಾನಿಸಿದ್ದಾರೆ ಎಂಬ ಕಾರಣಕ್ಕೆ ಸಭೆಯಲ್ಲಿದ್ದ ರಾಜ್ಯದ ಮಂತ್ರಿಗಳೇ ತೀವ್ರವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್, ನಮಗೆ ಕಾಶ್ಮೀರಿ ಪಂಡಿತರು ಮುಖ್ಯವೇ ಹೊರತು ಚಲನಚಿತ್ರವಲ್ಲ. ಬಿಜೆಪಿಯವರಿಗೆ ಕಾಶ್ಮೀರಿ ಫೈಲ್ಸ್‌ ಮುಖ್ಯವಾಗಬಹುದು, ಆದರೆ ನಮಗೆ ಕಶ್ಮೀರಿ ಪಂಡಿತರು ಮುಖ್ಯ. ನಾನು ಕೇಂದ್ರದಲ್ಲಿ ಇದ್ದಿದ್ದರೆ ಅವರ ಕುರಿತು ಸಿನಿಮಾ ಮಾಡುತ್ತಿರಲಿಲ್ಲ. ಅವರ ಕೈ ಹಿಡಿದು ಕಾಶ್ಮೀರಕ್ಕೆ ಕರೆದೊಯ್ದುತ್ತಿದ್ದೆ ಎಂದು ಕೇಜ್ರಿವಾಲ್ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *