ತುಮಕೂರು: ಯಶವಂತಪುರ-ಚಿಕ್ಕಮಗಳೂರು ನಡುವೆ ಸಂಚರಿಸುವ 07369/07370 ಸಂಖ್ಯೆಯ ಪ್ಯಾಸೆಂಜರ್ ರೈಲನ್ನು ಪ್ರಯಾಣಿಕರ ಅನುಕೂಲಕ್ಕಾಗಿ ತಿಪಟೂರು ತಾಲೂಕಿನ ಅರಳಗುಪ್ಪೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಕೋರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ನಾಗೇಶ್ ಮನವಿ ಸಲ್ಲಿಸಿದ್ದರು.
ದೆಹಲಿ ಪ್ರವಾಸದ ವೇಳೆ ರೈಲ್ವೆ ಸಚಿವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ, ಮನವಿ ಸಲ್ಲಿಸಿ, ಅರಳಗುಪ್ಪೆ ನಿಲ್ದಾಣದಲ್ಲಿ ರೈಲು ನಿಲುಗಡೆಯ ಅಗತ್ಯತೆಯನ್ನು ಕೇಂದ್ರ ಸಚಿವರಿಗೆ ನಾಗೇಶ್ ಮನವರಿಕೆ ಮಾಡಿದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರೇ ನನಗೆ ಬೆಂಬಲ ನೀಡಲಿಲ್ಲ: ಗೆದ್ದ ಬಿಜೆಪಿ ಅಭ್ಯರ್ಥಿ ಬೇಸರ
ಸುಮಾರು 3 ಸಾವಿರ ಜನಸಂಖ್ಯೆ ಇರುವ ಅರಳಗುಪ್ಪೆ ಗ್ರಾಮದ ಸುತ್ತಲಿನ 30ರಿಂದ 35 ಗ್ರಾಮಗಳ ಜನರು ಈ ರೈಲು ನಿಲ್ದಾಣವನ್ನು ಬಳಸುತ್ತಾರೆ. ಅರಳಗುಪ್ಪೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಚೇರಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬ್ಯಾಂಕ್‌ಗಳು ಇವೆ ಎಂದರು.
ಐತಿಹಾಸಿಕ ಪ್ರವಾಸಿ ತಾಣವಾಗಿರುವ ಅರಳಗುಪ್ಪೆ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ಚನ್ನಕೇಶವ ದೇವಾಲಯ ಮತ್ತು ಶ್ರೀ ಕಲ್ಲೇಶ್ವರ ದೇವಾಲಯಗಳಿವೆ. ಪುರಾತತ್ವ ಇಲಾಖೆಯಿಂದ ಈ ಐತಿಹಾಸಿಕ ದೇವಾಲಯಗಳು ಗುರುತಿಸಲ್ಪಟ್ಟಿವೆ. ಈ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ರಾಜಧಾನಿ ಸಂಪರ್ಕಿಸುವ ಪ್ಯಾಸೆಂಜರ್ ರೈಲನ್ನು ಅರಳಗುಪ್ಪೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಸಚಿವ ನಾಗೇಶ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: 2023ರ ಚುನಾವಣೆಯಲ್ಲಿ ಭಾಜಪ ಕಮಲ ಅರಳಲಿದೆ: ಬಸವರಾಜ ಬೊಮ್ಮಾಯಿ
ಈ ವೇಳೆ ರೈಲು ನಿಲುಗಡೆ ಮಾಡಲು ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದು ಅಶ್ವಿನಿ ವೈಷ್ಣವ್, ಸಚಿವ ಬಿಸಿ ನಾಗೇಶ್ ಅವರಿಗೆ ಭರವಸೆ ನೀಡಿದರು.