ಕಾಡಿನ ಮಕ್ಕಳಿಗೆ ಕಾಡು-ನಾಡು ಎರಡೂ ಕಡೆ ಇಲ್ಲ ಅಸ್ತಿತ್ವ – ಆದಿವಾಸಿ ಹೆಣ್ಣು ಮಕ್ಕಳ ಕರುಣಾಜನಕ ಕಥೆ ಹೇಳುವ ಕನ್ನೇರಿ

Public TV
3 Min Read
Satheesh Jarkiholi Kanneri Bangalore 1

ಚಿತ್ರ: ಕನ್ನೇರಿ
ನಿರ್ದೇಶನ: ನೀನಾಸಂ ಮಂಜು
ನಿರ್ಮಾಪಕರು: ಪಿ.ಪಿ ಹೆಬ್ಬಾರ್
ಸಂಗೀತ: ಕದ್ರಿ ಮಣಿಕಾಂತ್
ಛಾಯಾಗ್ರಾಹಣ: ಗಣೇಶ್ ಹೆಗ್ಡೆ
ತಾರಾಬಳಗ: ಅರ್ಚನಾ ಮಧುಸೂದನ್, ಎಂ ಕೆ ಮಠ, ಅರುಣ್ ಸಾಗರ್, ಅನಿತ ಭಟ್, ಸರ್ದಾರ್ ಸತ್ಯ, ಇತರರು

ನೀನಾಸಂ ಮಂಜು ನಿರ್ದೇಶನದಲ್ಲಿ ಮೂಡಿ ಬಂದಿರುವ ಕನ್ನೇರಿ ಸಿನಿಮಾ ಬಿಡುಗಡೆಯಾಗಿದೆ. ಹಾಡು, ಟ್ರೇಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಚಿತ್ರ ಪ್ರೇಕ್ಷಕರೆದುರು ಇಂದು ತೆರೆಕಂಡಿದೆ.

Kanneri Video Song

ಆದಿವಾಸಿ ಜನರನ್ನು ಒಕ್ಕಲೆಬ್ಬಿಸಿದ ನಂತರ ಅವರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ವಿಶೇಷವಾಗಿ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳ ಮೇಲೆ ಸಿನಿಮಾ ಬೆಳಕು ಚೆಲ್ಲುತ್ತದೆ. ಕೆಲಸಕ್ಕೆಂದು ನಗರದತ್ತ ಮುಖ ಮಾಡಿದ ಹೆಣ್ಣು ಮಕ್ಕಳು ಹೇಗೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ? ಅವರ ಮುಗ್ಧತೆಯನ್ನು ಜನ ಹೇಗೆಲ್ಲ ಬಳಸಿಕೊಳ್ಳುತ್ತಿದ್ದಾರೆ ಅನ್ನೋದನ್ನ ಇಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ವಿದ್ಯಾಭ್ಯಾಸದಿಂದ ವಂಚಿತರಾಗಿ, ಪೋಷಕರಿಂದಲೂ ದೂರವಾಗಿ ನಗರದಲ್ಲೂ ನೆಲೆ ಇಲ್ಲದೆ ತಮ್ಮ ಮುಗ್ಧತೆಯಿಂದಲೇ ಆರೋಪಗಳನ್ನೆದುರಿಸುತ್ತ ಬದುಕುತ್ತಿರುವ ಎಷ್ಟೋ ಹೆಣ್ಣು ಮಕ್ಕಳ ಕಣ್ಣೀರ ಕಥೆಯನ್ನು ಕನ್ನೇರಿ ಹೇಳುತ್ತದೆ.

Kanneri 1

ಡಾಕ್ಯುಮೆಂಟರಿ ಫಿಲ್ಮಂ ಮೇಕರ್ ಅರವಿಂದ್ ಆದಿವಾಸಿ ಜನರಿಗಾಗಿ ಸರ್ಕಾರ ಮೀಸಲಿಟ್ಟ ಜಾಗಕ್ಕೆ ಬಂದು ಅಲ್ಲಿನ ಜನರ ಪರಿಸ್ಥಿತಿ, ಮಕ್ಕಳ ಶಿಕ್ಷಣದ ಬಗ್ಗೆ ವಿಚಾರಸಿದಾಗ ಆತನಿಗೆ ಮುತ್ತಮ್ಮ ಎಂಬುವ ಪ್ರತಿಭಾನ್ವಿತ ಹುಡುಗಿ ಬಗ್ಗೆ ತಿಳಿಯುತ್ತದೆ. ತನ್ನ ತಾತನ ಆರೋಗ್ಯ ಕಾಪಾಡಲು ಕಾಸಿಲ್ಲದಿದ್ದಾಗ ನಗರವೊಂದರಲ್ಲಿ ಶ್ರೀಮಂತರೊಬ್ಬರ ಮನೆಗೆಲಸಕ್ಕೆ ಸೇರುವ ಮುತ್ತಮ್ಮ ಮತ್ತೆ ಊರಿಗೆ ವಾಪಸ್ಸು ಮರಳುವುದಿಲ್ಲ. ಎರಡು ವರ್ಷವಾದರೂ ಆಕೆಯ ಸುಳಿವೂ ಇರುವುದಿಲ್ಲ. ಮುತ್ತಮ್ಮನ ಕಥೆ ಕೇಳಿ ಆಕೆಯನ್ನು ಹುಡುಕಲು ಅರವಿಂದ್ ಹೊರಡುತ್ತಾನೆ. ಆ ಪ್ರಯತ್ನದಲ್ಲಿ ಯಶಸ್ವಿಯೂ ಆಗುತ್ತಾನೆ. ಜೈಲಿನಲ್ಲಿರುವ ಮುತ್ತಮ್ಮನನ್ನು ಕಂಡು ಮರುಗುತ್ತಾನೆ. ಆಕೆಯನ್ನು ಆರೋಪದಿಂದ ಮುಕ್ತಗೊಳಿಸಲು ಪಣತೊಡುತ್ತಾನೆ. ಅರವಿಂದ್ ಪ್ರಯತ್ನ ಯಶಸ್ವಿಯಾಗುತ್ತಾ? ಮುತ್ತಮ್ಮ ಮತ್ತೆ ತನ್ನ ತಾತನ ಬಳಿ ಸೇರುತ್ತಾಳಾ? ಅಷ್ಟಕ್ಕೂ ಆಕೆ ಜೈಲು ಸೇರಲು ಮಾಡಿದ ಪ್ರಮಾದವಾದರೂ ಏನು? ಇದೇ ಚಿತ್ರದ ಇಂಟ್ರಸ್ಟಿಂಗ್ ಸಂಗತಿ. ಇದನ್ನೂ ಓದಿ: ನಟಿ ಸಂಜನಾಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ- ಯುವಕ ಪೊಲೀಸ್ ವಶಕ್ಕೆ

Satheesh Jarkiholi Kanneri Bangalore

ಮುತ್ತಮ್ಮ ಎಂಬ ಹೆಣ್ಣುಮಗಳೊಬ್ಬಳ ಕಥೆಯ ಮೂಲಕ ಇಡೀ ಆದಿವಾಸಿ ಹೆಣ್ಣುಮಕ್ಕಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ನೀನಾಸಂ ಮಂಜು. ನಗರದತ್ತ ಕೆಲಸ ಅರಸಿ ಬರುವ ಅಮಾಯಕ ಹೆಣ್ಣು ಮಕ್ಕಳನ್ನು ಹೇಗೆ ಬಲೆ ಬೀಸಿ ಚಕ್ರವ್ಯೂಹದಲ್ಲಿ ಸಿಕ್ಕಿಸುತ್ತಾರೆ. ಅವರ ಬದುಕು ಎಷ್ಟು ಶೋಚನೀಯವಾಗಿದೆ ಎನ್ನುವುದನ್ನು ಮುತ್ತಮ್ಮ ಪಾತ್ರದ ಮೂಲಕ ಹೇಳುವ ಪ್ರಯತ್ನ ನಿರ್ದೇಶಕರದ್ದು, ಈ ಪ್ರಯತ್ನ ಮನಸ್ಸಿಗೆ ನಾಟುತ್ತದೆ. ಕಾಡಿನಲ್ಲಿ ಸುಂದರ ಬದುಕು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದವರನ್ನು ನಿರ್ದಾಕ್ಷೀಣ್ಯವಾಗಿ ಹೊರಗಟ್ಟಿ ನಾಡಿನಲ್ಲೂ ಒಂದೊಳ್ಳೆ ಜೀವನ ಕಟ್ಟಿಕೊಡದೇ ಅವರನ್ನು ಅರೆ ಜೀವವಾಗಿ ಮಾಡುವ ವ್ಯವಸ್ಥೆ, ಈಗಲೂ ಸೌಲಭ್ಯವಿಲ್ಲದೇ ಒಪ್ಪತ್ತು ಊಟಕ್ಕೂ ಪರದಾಡುವ ಅವರ ನೋವಿನ ಕಥೆಯನ್ನು ತೆರೆದಿಡುತ್ತದೆ ಚಿತ್ರ. ನೆಲದ ಮಕ್ಕಳಿಗೆ ನೆಲೆ ಇಲ್ಲವಲ್ಲ ಎಂದು ಕಾಡುತ್ತದೆ.

Kanneri Video Song 2

ನಿರ್ದೇಶಕರ ಭಾವನೆಗಳನ್ನು ಛಾಯಾಗ್ರಾಹಕ ಗಣೇಶ್ ಹೆಗ್ಡೆ ಅಚ್ಚುಕಟ್ಟಾಗಿ ಕಣ್ಮನ ಸೆಳೆಯುವಂತೆ ಸೆರೆ ಹಿಡಿದಿದ್ದಾರೆ. ಹಾಡಿಯ ನಾಯಕನ ಪಾತ್ರದಲ್ಲಿ ನಟಿಸಿರುವ ಎಂ.ಕೆ. ಮಠ ಅವರ ಅಭಿನಯ ಮನಮುಟ್ಟುತ್ತದೆ. ಮುತ್ತಮ್ಮನ ಪಾತ್ರದಲ್ಲಿ ಅರ್ಚನಾ ಮಧುಸೂದನ್ ಇಷ್ಟವಾಗುತ್ತಾರೆ, ಲಾಯರ್ ಪಾತ್ರದಲ್ಲಿ ಅರುಣ್ ಸಾಗರ್, ಪೊಲೀಸ್ ಆಗಿ ಸರ್ದಾರ್ ಸತ್ಯ, ನೆಗೆಟಿವ್ ರೋಲ್‍ನಲ್ಲಿ ಅನಿತಾ ಭಟ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ ಕೂಡ ಚಿತ್ರದ ಪ್ಲಸ್ ಪಾಯಿಂಟ್. ನೀನಾಸಂ ಮಂಜು ಆಯ್ಕೆ ಮಾಡಿಕೊಂಡ ಕಟೆಂಟ್ ಹಾಗೂ ಅದನ್ನು ತೆರೆ ಕಟ್ಟಿಕೊಡುವಲ್ಲಿನ ಪರಿಶ್ರಮ ಖಂಡಿತ ಮೆಚ್ಚುವಂತದ್ದು. ಮನಸ್ಸಿಗೆ ನಾಟುವ ಕತೆ, ತೆರೆ ಮೇಲೆ ತಂದ ರೀತಿ ಎಲ್ಲವೂ ಓಕೆ ಎನಿಸಿದರು ಕೆಲವು ಸನ್ನಿವೇಶಗಳಲ್ಲಿ ಇನ್ನೂ ಏನು ಬೇಕಿತ್ತು ಎನ್ನುವ ಭಾವ ಮೂಡುತ್ತದೆ. ಚಿತ್ರಕಥೆ ಇನ್ನಷ್ಟು ಬಿಗಿಯಾಗಿದರೆ ಖಂಡಿತ ಕನ್ನೇರಿ ಮತ್ತಷ್ಟು ಮನಸ್ಸಿನಾಳಕ್ಕೆ ನಾಟುವುದರಲ್ಲಿ ಎರಡು ಮಾತಿಲ್ಲ. ಇದನ್ನೂ ಓದಿ:  ಹೆಣ್ಣು ಮಗುವಿನ ತಂದೆಯಾದ ರಿಶಬ್ ಶೆಟ್ಟಿ

ರೇಟಿಂಗ್ : 3.5/5

Share This Article
Leave a Comment

Leave a Reply

Your email address will not be published. Required fields are marked *