ಮಾಸ್ಕೋ: ರಷ್ಯಾ ಸೇನೆ ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿದೆ. ದಾಳಿಯ ಕೆಲವೇ ಗಂಟೆಗಳ ನಂತರ ಉಕ್ರೇನ್ ಸೇನಾ ವಾಯುನೆಲೆಗಳು ಮತ್ತು ಅದರ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಗೊಳಿಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ವರದಿಯನ್ನು ನೀಡಿದೆ.
ಈ ವರದಿಯಲ್ಲಿ, ಉಕ್ರೇನಿಯನ್ ಸೇನಾ ವಾಯುನೆಲೆಗಳಲ್ಲಿನ ಮಿಲಿಟರಿ ಮೂಲಸೌಕರ್ಯವನ್ನು ನಾಶಮಾಡಲಾಗಿದೆ. ರಾಜಧಾನಿ ಕೈವ್‍ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಿದೆ. ಈ ನಡುವೆ ರಷ್ಯಾದ ಐದು ಯುದ್ಧ ವಿಮಾನ ಮತ್ತು ಹೆಲಿಕ್ಯಾಪ್ಟರ್ ನನ್ನು ಉಕ್ರೇನ್ ನಾಶ ಮಾಡಿದೆ. ಇದನ್ನೂ ಓದಿ: ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ಮಾರ್ಗಮಧ್ಯದಲ್ಲೇ ವಾಪಸ್
ವ್ಲಾಡಿಮಿರ್ ಪುಟಿನ್ ಇಂದು ಉಕ್ರೇನ್ ಮೇಲೆ ದಾಳಿ ಮಾಡುವುದಾಗಿ ಘೋಷಿಸಿದಾಗ ಎಲ್ಲ ಕಡೆ ಇದು ಸಂಚಲನ ಸೃಷ್ಟಿ ಮಾಡಿತ್ತು. ಯುದ್ಧ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ನಲ್ಲಿ ಸ್ಫೋಟಗಳು ಕೇಳಿಬಂದವು. ಈ ವೇಳೆ ವಿದೇಶಾಂಗ ಸಚಿವರು ಉಕ್ರೇನ್ ಮೇಲೆ ರಷ್ಯಾ ‘ಪೂರ್ಣ ಪ್ರಮಾಣದ ಆಕ್ರಮಣ’ ನಡೆಸುತ್ತಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಈ ವಾರ ಪೂರ್ತಿ ಅಮೆರಿಕ, ರಾಜತಾಂತ್ರಿಕತೆ ಮತ್ತು ರಷ್ಯಾದ ಮೇಲೆ ಪಾಶ್ಚಿಮಾತ್ಯ ನಿರ್ಬಂಧಗಳನ್ನು ಹೇರಿದರೂ ಸಹ ಪುಟಿನ್ ಅವರನ್ನು ಯುದ್ದ ಮಾಡದಂತೆ ತಡೆಯಲು ಸಾಧ್ಯವಾಗಿಲ್ಲ. ಅವರು ಉಕ್ರೇನ್ ಗಡಿಯಲ್ಲಿ 1,50,000 ರಿಂದ 2,00,000 ಸೈನಿಕರನ್ನು ಉಕ್ರೇನ್ ಮೇಲೆ ದಾಳಿ ಮಾಡುವುದಕ್ಕಾಗಿಯೇ ಕಳುಹಿಸಿದ್ದರು.
‘ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ’ ಎಂದು ಪುಟಿನ್ ಹೇಳಿದ ತಕ್ಷಣ ಎಲ್ಲ ಕಡೆ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಇತರ ಪಾಶ್ಚಿಮಾತ್ಯ ನಾಯಕರಿಂದ ಈ ಘೋಷಣೆ ವಿರುದ್ಧ ಖಂಡನೆ ಕೇಳಿಬಂತು. ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಈ ಯುದ್ಧ ಭಾರೀ ಪರಿಣಾಮ ಬಿರುತ್ತೆ ಎಂದು ಎಲ್ಲ ಕಡೆ ಭೀತಿ ಪ್ರಾರಂಭವಾಗಿದೆ.
ಪ್ರಕಟಣೆಯ ಸ್ವಲ್ಪ ಸಮಯದ ನಂತರ, ಉಕ್ರೇನ್‍ನ ರಾಜಧಾನಿ ಕೈವ್ ಮತ್ತು ಇತರ ಹಲವಾರು ನಗರಗಳಲ್ಲಿ ದಾಳಿ ನಡೆದಿದ್ದು, ಸ್ಫೋಟಗಳು ಕೇಳಿಬಂದವು. ಈ ವೇಳೆ ಉಕ್ರೇನಿಯನ್ ಗಡಿ ಕಾವಲುಗಾರರು ರಷ್ಯಾದ ಮತ್ತು ಬೆಲರೂಸಿಯನ್ ಗಡಿಗಳಲ್ಲಿ ದಾಳಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಉಕ್ರೇನಿಯನ್ ನಾಯಕ ವೊಲೊಡಿಮಿರ್ ಝೆಲೆನ್ಸ್ಕಿ ಫೇಸ್‍ಬುಕ್ ಪೋಸ್ಟ್‍ನಲ್ಲಿ, ರಷ್ಯಾ ತನ್ನ ದೇಶದ ‘ಮಿಲಿಟರಿ ಮೂಲಸೌಕರ್ಯ’ದ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ಗಾಬರಿಯಾಗದಂತೆ ನಾಗರಿಕರಿಗೆ ಧೈರ್ಯ ಕೊಟ್ಟಿದ್ದು, ನಾವು ಈ ಯುದ್ಧದಲ್ಲಿ ಜಯವನ್ನು ಸಾಧಿಸುತ್ತೇವೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್
ಪುಟಿನ್ ಇದೀಗ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ್ದಾರೆ. ಶಾಂತಿಯುತ ಉಕ್ರೇನಿಯನ್ ನಗರಗಳು ಗಲಭೆಗಳಿಂದ ತುಂಬಿದೆ ಎಂದು ಡಿಮಿಟ್ರೋ ಕುಲೆಬಾ ಟ್ವೀಟ್ ಮಾಡಿದ್ದಾರೆ. ಇದು ಆಕ್ರಮಣಕಾರಿ ಯುದ್ಧ, ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಮತ್ತು ಗೆಲ್ಲುತ್ತದೆ. ಜಗತ್ತು ಪುಟಿನ್ ಅವರನ್ನು ತಡೆಯಬೇಕು ಎಂದು ಬರೆದುಕೊಂಡಿದ್ದಾರೆ.