ಲಕ್ನೋ: ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಮುಖ್ಯಮಂತ್ರಿಗಳು ಜನರನ್ನು ತಣ್ಣಗಾಗಿಸುವ ಬಗ್ಗೆ ಮಾತನಾಡುವ ಬದಲು ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಂಪುರದಲ್ಲಿ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ವ್ಯಾಪಾರ ಮತ್ತು ವ್ಯವಹಾರಗಳನ್ನು ಕೆಟ್ಟ ನೀತಿಗಳಿಂದ ನಾಶಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ‘ಗರ್ಮಿ ನಿಕಾಲ್ ದೆಂಗೆ’, ಚರ್ಬಿ ನಿಕಾಲ್ ದೆಂಗೆ’ ಎಂದು ಹೇಳುತ್ತಲೇ ಇರುತ್ತಾರೆ. ಈ ಸಮಸ್ಯೆಗಳು ಜನರನ್ನು ಕಾಡುತ್ತಿವೆಯೇ? ಐದು ವರ್ಷಗಳ ಕಾಲ ಅಧಿಕಾರದಲ್ಲಿರುವ ಅವರು ಖಾಲಿ ಕೈನಲ್ಲಿರುವವರಿಗೆ ಏಕೆ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿಎಂ ಯೋಗಿ ವೇಷ ತೊಟ್ಟು ಮತಗಟ್ಟೆಗೆ ಬಂದ ವ್ಯಕ್ತಿ – ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದ ಜನ
ಮತದಾರರು ರಾಜಕಾರಣಿಗಳ ಮಾತನ್ನು ಆಲಿಸಿ, ಅವರು ಜನರ ಅಭಿವೃದ್ಧಿ ಮತ್ತು ಕಲ್ಯಾಣದ ಬಗ್ಗೆ ಮಾತನಾಡುತ್ತಾರೆ ಅಂತ ತಿಳಿದುಕೊಂಡಿರುತ್ತಾರೆ. ಆದರೆ ಸರ್ಕಾರ ಜನರಿಗಾಗಿ ಏನು ಮಾಡಿದೆ? ಪಿಎಸ್‍ಯುಗಳನ್ನು (ಸಾರ್ವಜನಿಕ ವಲಯದ ಉದ್ಯಮಗಳು) ತನ್ನ ಸ್ನೇಹಿತರಿಗೆ ಮಾರಾಟ ಮಾಡಿದೆ. ಪಿಎಸ್‍ಯುಗಳಿಂದ ಉದ್ಯೋಗಗಳು ಬರುತ್ತವೆ. ಎಲ್ಲಾ ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯವಹಾರಗಳು ಮತ್ತು ಉತ್ಪಾದನಾ ಘಟಕಗಳು ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಆದರೆ ಸರ್ಕಾರವು ನೋಟು ಅಮಾನ್ಯೀಕರಣದಿಂದ ಈ ವಲಯವನ್ನು ದುರ್ಬಲಗೊಳಿಸಿದೆ ಎಂದು ಕಿಡಿಕಾರಿದ್ದಾರೆ.
ಕಪ್ಪುಹಣ ಹೊಂದಿರುವವರು ಉತ್ತಮವಾಗಿ ಜೀವನ ನಡೆಸುತ್ತಿದ್ದಾರೆ. ಆದರೆ ಸರ್ಕಾರದ ಆರ್ಥಿಕ ನೀತಿಗಳಿಂದ ಜನಸಾಮಾನ್ಯರಿಗೆ ಹೊಡೆತ ಬಿದ್ದಿದೆ. ನೋಟು ನಿಷೇಧವು ಲಕ್ಷಗಟ್ಟಲೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳ ನಾಶಕ್ಕೆ ಕಾರಣವಾಗಿದೆ. ತದನಂತರ ನಿಮ್ಮ ಮೇಲೆ ಜಿಎಸ್‍ಟಿ ಹೇರಲಾಯಿತು. ಅಲ್ಲದೇ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಜನ ಜೀವನ ಅಸ್ತವ್ಯಸ್ತವಾಯಿತು. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಅವರು ನಿಮ್ಮನ್ನು ಉಳಿಸಲು ಅಥವಾ ನಿಮ್ಮನ್ನು ಬಲಪಡಿಸಲು ಏನನ್ನೂ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 702 ದಿನಗಳ ಜೀವನ್ಮರಣ ಹೋರಾಟ ಅಂತ್ಯ – ಮರದ ರೆಂಬೆಗೆ 7ರ ಬಾಲಕಿ ಬಲಿ
ಬಿಜೆಪಿಯದ್ದು ಬಡವರ ಸರ್ಕಾರವಲ್ಲ. ಬದಲಿಗೆ ಶ್ರೀಮಂತರ ಪರವಾಗಿರುವ ಸರ್ಕಾರ. ಬಿಜೆಪಿ ಬಡ ಜನರಿಗೆ ಸಹಾಯ ಮಾಡಿಲ್ಲ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ರಾಮ್‍ಪುರ ಜಿಲ್ಲೆಯ ಚಮ್ರುವಾ, ಬಿಲಾಸ್‍ಪುರ, ಮಿಲಾಕ್ ಮತ್ತು ರಾಮ್‍ಪುರ (ಸದರ್) ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 14 ರಂದು ಎರಡನೇ ಹಂತದ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ.