ನವದೆಹಲಿ: ವಿಜಯ್ ಚೌಕ್‌ನಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಿಂದ ಮಹಾತ್ಮ ಗಾಂಧೀಜಿ ಅವರ ಪ್ರಿಯವಾದ ಗೀತೆಯನ್ನು ಕೈ ಬಿಟ್ಟಿದ್ದಕ್ಕೆ ಕೇಂದ್ರ ಸ್ಪಷ್ಟನೆ ನೀಡಿದೆ.
ಗಣರಾಜ್ಯೋತ್ಸವ ಕಾರ್ಯಕ್ರಮದ ಮುಕ್ತಾಯದ ಭಾಗವಾಗಿ ಡಿ.29 ರಂದು ನಡೆಯುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಿಂದ ‘ಅಬೈಡ್ ವಿತ್ ಮಿʼ ಗೀತೆಯನ್ನು ಕೈಬಿಡಲಾಗಿದೆ. ಗಾಂಧೀಜಿ ಅವರಿಗೆ ಇಷ್ಟವಾಗಿದ್ದ ಈ ಗೀತೆಯನ್ನು ಕೈಬಿಟ್ಟಿದ್ದಕ್ಕೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ಗೀತೆಯನ್ನು ಕೈಬಿಟ್ಟದ್ದಕ್ಕೆ ಕಾರಣ ನೀಡಿದೆ.
ವಸಾಹತುಶಾಹಿ (ಬ್ರಿಟಿಷರ) ಕಾಲದ ಹಾಗೂ ವಿಶ್ವಯುದ್ಧದ ಕಾಲದ ಗೀತೆಯಾಗಿದ್ದ ‘ಅಬೈಡ್ ವಿತ್ ಮಿ’ ಅನ್ನು ಕೈಬಿಡಲಾಗಿದೆ. ಇದರ ಬದಲಾಗಿ ಇನ್ನು ಮುಂದೆ ಭಾರತೀಯ ದೇಶಭಕ್ತಿ ಗೀತೆಗಳನ್ನು ಮೊಳಗಿಸಲಾಗುತ್ತದೆ. ‘ಅಬೈಡ್ ವಿತ್ ಮಿ’ ಹಾಡಿನ ಬದಲು ‘ಏ ಮೇರೆ ವತನ್ ಕೇ ಲೋಗೋಂ’ ಸೇರಿಸಲಾಗಿದೆ. ಬೀಟಿಂಗ್ ರಿಟ್ರೀಟ್ ಅಂತ್ಯದ ವೇಳೆ ‘ಸಾರೇ ಜಹಾಂಸೇ ಅಚ್ಛಾ’ ಗೀತೆಯನ್ನು ನುಡಿಸಲಾಗುತ್ತದೆ ಎಂದು ಹೇಳಿದೆ.
ಬೀಟಿಂಗ್ ರಿಟ್ರೀಟ್‌ನ ಭಾಗವಾಗಿದ್ದ ಹಲವಾರು ವಿದೇಶಿ ಹಾಡುಗಳನ್ನು ಕಾಲಕಾಲಕ್ಕೆ ಕೈಬಿಡಲಾಗಿದೆ. ಅದರ ಬದಲಾಗಿ ಭಾರತೀಯ ದೇಶಭಕ್ತಿಗೀತೆಗಳನ್ನು ಸೇರಿಸಲಾಗಿದೆ. ಇದನ್ನೂ ಓದಿ: 2047ರ ಮೊದಲು ನವ ಭಾರತವನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ: ಮೋದಿ
ಗಾಂಧೀಜಿ ಅವರಿಗೆ ಪ್ರಿಯವಾಗಿದ್ದ ‘ಅಬೈಡ್ ವಿತ್ ಮಿ’ ಗೀತೆಯು ‘ಜೀವನಪೂರ್ತಿ, ಸಾವಿನವರೆಗೂ ಜೊತೆಗೇ ಇರು’ ಎಂದು ದೇವರನ್ನು ಕೋರುವ ಪ್ರಾರ್ಥನಾ ಗೀತೆಯಾಗಿದೆ. ಸ್ಕಾಟ್ಲೆಂಡ್‌ನ ಹೆನ್ರಿ ಫ್ರಾನ್ಸಿಸ್ ಲೈಟ್ ಅವರು 1847ರಲ್ಲಿ ರಚಿಸಿದ್ದರು. ಶತಮಾನಗಳಿಂದಲೂ ಸೇನಾ ಸಂಪ್ರದಾಯದಂತೆ ನಿತ್ಯದ ಯುದ್ಧ ಚಟುವಟಿಕೆಗಳು ಮುಗಿದ ಬಳಿಕ ಅಬೈಡ್ ವಿತ್ ಮಿ ಹಾಡನ್ನು ವಾದ್ಯಗಳ ಮೂಲಕ ನುಡಿಸುವ ಸಂಪ್ರದಾಯ ಜಗತ್ತಿನ ಹಲವು ಕಡೆಯಿದೆ. ಇದನ್ನೂ ಓದಿ: ಬೆಂಗಳೂರಿನ ಸೈಯದ್ ಫತೀನ್‌ಗೆ ಪ್ರತಿಷ್ಠಿತ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ
ಮೋದಿ ನೇತೃತ್ವದ ಸರ್ಕಾರ ಈ ಹಿಂದಿನಿಂದಲೂ ಅನುಸರಿಸಲಾಗುತ್ತಿದ್ದ ಸಂಪ್ರದಾಯಗಳನ್ನು ಕೈ ಬಿಟ್ಟು ಮಹತ್ಮಾ ಗಾಂಧೀಜಿ ಅವರಿಗೆ ಅವಮಾನ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ. ಈ ಟೀಕೆಗೆ, ದೇಶಕ್ಕೆ ಸ್ವಾಂತ್ರತ್ಯ ಬಂದು 75 ವರ್ಷವಾದರೂ ಗುಲಾಮಿ ಸಂಸ್ಕೃತಿ ಇನ್ನೂ ದೇಶದಲ್ಲಿ ಇದೆ. ಕೇಂದ್ರ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಪ್ರತಿಯಾಗಿ ಕೌಂಟರ್ ಕೊಡುತ್ತಿದ್ದಾರೆ.