2 ದಿನದಲ್ಲಿ ಮದುವೆ ಇಟ್ಕೊಂಡು ಬ್ಯಾಂಕ್ ದರೋಡೆಗೆ ಬಂದು ಸಿಕ್ಕಿಬಿದ್ದ ಕಳ್ಳ ಮದುಮಗ

Public TV
1 Min Read
bank robbery

ಹುಬ್ಬಳ್ಳಿ: ಮದುವೆಗೆ ಇನ್ನೆರಡು ದಿನವಷ್ಟೇ ಬಾಕಿ ಇತ್ತು. ಆದರೂ ತನ್ನ ಕೈಚಳಕ ತೋರಲು ಮುಂದಾಗಿದ್ದ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ. ಹಸೆಮಣೆ ಏರಬೇಕಿದ್ದ ಮದುಮಗ ಈಗ ಕಂಬಿ ಎಣಿಸುತ್ತಿದ್ದಾನೆ.

ಹೌದು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹಾಡಹಗಲೇ ಬ್ಯಾಂಕ್ ದರೋಡೆ ಮಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಮತ್ತು ನಾಗರಿಕರು ಹಿಡಿದಿದ್ದಾರೆ. ಇದನ್ನೂ ಓದಿ: ಬಾಂಬ್ ಮಾಡುವುದನ್ನ ಕಲಿತು ಪತ್ನಿ ಮೇಲೆ ಅತ್ಯಾಚಾರ ಮಾಡಿದವನನ್ನ ಕೊಂದ!

bank robbery1

ವಿಜಯಪುರದ ಪ್ರವೀಣಕುಮಾರ್ ಅಪ್ಪಾಸಾಹೇಬ್ ಪಾಟೀಲ ಬಂಧಿತ. ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ, ಕಳೆದ ಎರಡು ದಿನದ ಹಿಂದೆ ಹುಬ್ಬಳ್ಳಿಗೆ ಬಂದು ಭಾರತಿ ಲಾಡ್ಜ್ನಲ್ಲಿ ತಂಗಿದ್ದ. ಇಂದು ಕೊಪ್ಪಿಕರ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕಿಗೆ ನುಗ್ಗಿ ಕ್ಯಾಷಿಯರ್‌ಗೆ ಚಾಕು ತೋರಿಸಿ, ಬ್ಯಾಗಿನಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಹಣವನ್ನು ಹಾಕಿಸಿದ್ದಾನೆ. ತಕ್ಷಣವೇ ಪರಾರಿಯಾಗಲು ಯತ್ನಿಸಿದಾಗ, ಬ್ಯಾಂಕಿನ ಮಹಿಳಾ ಸಿಬ್ಬಂದಿ ಕೂಗಿಕೊಂಡಿದ್ದಾರೆ.

ಕೊಪ್ಪಿಕರ ರಸ್ತೆಯ ಮೆಟ್ರೋ ಪೊಲೀಸ್ ಹೋಟೆಲ್ ಬಳಿ ಕರ್ತವ್ಯನಿರತ ದಕ್ಷಿಣ ಸಂಚಾರಿ ಠಾಣೆಯ ಪೊಲೀಸ್ ಉಮೇಶ ಹಾಗೂ ಉಪನಗರ ಠಾಣೆಯ ಪೇದೆಯೊಬ್ಬರು ಆರೋಪಿಯನ್ನು ಹಣದ ಸಮೇತ ಹಿಡಿದಿದ್ದಾರೆ. ಇದನ್ನೂ ಓದಿ: ಯುವಕನ ಹತ್ಯೆಗೈದು ಪೊಲೀಸ್ ಠಾಣೆ ಮುಂದೆಯೇ ಬೀಸಾಕಿದ

Police Jeep

ಆರೋಪಿ ಪ್ರವೀಣನ ಮದುವೆ ಇನ್ನೆರಡು ದಿನದಲ್ಲಿ ವಿಜಯಪುರದಲ್ಲಿ ನಡೆಯುವುದಿತ್ತು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. ಹಾಡಹಗಲೇ ನಡೆಯುತ್ತಿದ್ದ ದರೋಡೆಯನ್ನು ನಿಯಂತ್ರಿಸುವಲ್ಲಿ ಸಫಲರಾದ ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಕಮಿಷನರ್ ಲಾಭೂರಾಮ್ ಅಭಿನಂದನೆ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *