ಕಾಫಿನಾಡಿನ ಎರಡು ವಸತಿ ಶಾಲೆಯ 55 ಮಕ್ಕಳಿಗೆ ಕೊರೊನಾ

Public TV
2 Min Read
CKM corona 1

ಚಿಕ್ಕಮಗಳೂರು: ಜಿಲ್ಲೆಯ ಎರಡು ವಸತಿ ಶಾಲೆಯ ಸುಮಾರು 55 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ನಗರದ ಕಲ್ಯಾಣ ನಗರದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯ 17 ಮಕ್ಕಳು ಹಾಗೂ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 38 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆದರೆ ಮಕ್ಕಳಿಗೆ ಸೋಂಕು ಹರಡಲು ಕಾರಣವೇನು ಎಂದು ಜಿಲ್ಲಾಡಳಿತ ಗೊಂದಲಕ್ಕೊಳಗಾಗಿದೆ.

CKM corona 4

ಇದು 1 ರಿಂದ 7ನೇ ತರಗತಿವರೆಗಿನ ವಸತಿ ಶಾಲೆಯಾಗಿದ್ದು, ವಿಸ್ತಾರವಾದ ಆವರಣವಿದೆ. ಮಕ್ಕಳ ಆಟ-ಪಾಠ ಎಲ್ಲಾ ಒಂದೇ ಕಾಂಪೌಂಡ್ ಒಳಗೆ ನಡೆಯುತ್ತದೆ. ಮಕ್ಕಳು ಹೊರಗೇ ಬಿಡುವುದಿಲ್ಲ. ಆದರೂ ಶಾಲೆ ಒಳಗೆ ಹೆಮ್ಮಾರಿ ಕೊರೊನಾ ಹೇಗೆ ಬಂದಿದೆ ಎನ್ನುವುದು ನಿಗೂಢವಾಗಿದ್ದು, ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ. ಇದನ್ನೂ ಓದಿ: ಸಿಎಂಗೆ ಕೊರೊನಾ – ಹೋಂ ಐಸೋಲೇಷನ್‍ಗೆ ಒಳಗಾದ ಸಚಿವ ಸುಧಾಕರ್

CKM corona 2

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 424 ಮಕ್ಕಳಿದ್ದು, ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ 38 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ, ಯಾವ ಮಕ್ಕಳಲ್ಲಿಯೂ ಸೋಂಕಿನ ಲಕ್ಷಣಗಳಿಲ್ಲ. ಸದ್ಯಕ್ಕೆ ಶಾಲೆಯನ್ನೇ ಸೀಲ್‍ಡೌನ್‍ಗೊಳಿಸಿರುವ ಜಿಲ್ಲಾಡಳಿತ ಪ್ರತ್ಯೇಕ ಐಸೋಲೇಶನ್ ಮೂಲಕ ಮಕ್ಕಳಿಗೆ ಚಿಕಿತ್ಸೆ ಮಂದುವರೆಸಿದ್ದು, ಇಬ್ಬರು ನರ್ಸ್ ಹಾಗೂ ಓರ್ವ ವೈದ್ಯರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಶಾಲೆಗೆ ಭೇಟಿ ನೀಡಿರುವ ಶಾಸಕ ಎಂ.ಪಿ.ಕುಮಾರಸ್ವಾಮಿ ಮಕ್ಕಳ ಯೋಗಕ್ಷೇಮ ವಿಚಾರಿಸಿ ಪೋಷಕರು ಹಾಗೂ ಮಕ್ಕಳಿಗೆ ನಿಮ್ಮ ಜವಾಬ್ದಾರಿ ನಮ್ಮದ್ದು. ಯಾರೂ ಆತಂಕಕ್ಕೊಳಗಾಗಬೇಡಿ ಎಂದು ಧೈರ್ಯ ತುಂಬಿದ್ದಾರೆ.

CKM corona 3

ಮತ್ತೊಂದೆಡೆ ಚಿಕ್ಕಮಗಳೂರು ನಗರದ ಅಂಬೇಡ್ಕರ್ ವಸತಿ ಶಾಲೆಯಲ್ಲೂ 17 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಲ್ಲೂ ಕೂಡ ಮಕ್ಕಳು ಎಲ್ಲೂ ಹೋಗಿಲ್ಲ. ಆದರೂ ಕೊರೊನಾ ಸೋಂಕು ಮಕ್ಕಳಿಗೆ ತಗುಲಿರುವುದು ಭವಿಷ್ಯದ ಆತಂಕಕ್ಕೆ ಕಾರಣವಾಗಿದೆ. ಈ ಶಾಲೆಯಲ್ಲಿ 214 ಜನ ಮಕ್ಕಳಿದ್ದಾರೆ. 194 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ 17 ಜನರಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ. ಇದನ್ನೂ ಓದಿ: BJP ರಾಜ್ಯಾಧ್ಯಕ್ಷ, ರಾಷ್ಟ್ರಾಧ್ಯಕ್ಷರಿಗೆ ಕೊರೊನಾ ಪಾಸಿಟಿವ್

CKM corona 5

ಸರ್ಕಾರದ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ವಸತಿ ಶಾಲೆಗಳಲ್ಲಿ ಮಕ್ಕಳ ಪರೀಕ್ಷೆಗೆ ಮುಂದಾದಾಗ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಹೇಗೆ ಬಂದಿರಬಹುದು ಎನ್ನುವ ಮಾಹಿತಿ ಸರ್ಕಾರಕ್ಕೆ ದೊರೆತ್ತಿಲ್ಲ. ಕಳೆದ ತಿಂಗಳಷ್ಟೇ ಜಿಲ್ಲೆಯ ನವೋದಯ ಶಾಲೆಯಲ್ಲಿ 104 ಮಕ್ಕಳಿಗೆ ಕೊರೊನಾ ಕಾಣಿಸಿಕೊಂಡಿತ್ತು. ಒಂದೆಡೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಓಮಿಕ್ರಾನ್ ಕೇಸ್ ಕಂಡು ಜನ ಕಂಗಾಲಾಗಿದ್ದಾರೆ. ಮತ್ತೊಂದೆಡೆ ಜಿಲ್ಲೆಗೆ ಎಗ್ಗಿಲ್ಲದೆ ಬರುತ್ತಿರುವ ಪ್ರವಾಸಿಗರು ಕಾಫಿನಾಡಿಗರಿಗೆ ಮತ್ತಷ್ಟು ಭಯ ತರಿಸಿದ್ದಾರೆ. ಹಾಗಾಗಿ, ಜಿಲ್ಲೆಯ ಜನ ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಕೂಡಲೇ ಜಿಲ್ಲೆಗೆ ಬರುವ ಪ್ರವಾಸಿಗರನ್ನು ನಿಯಂತ್ರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.


Coronavirus, Childrens, Chikkamagaluru

Share This Article
Leave a Comment

Leave a Reply

Your email address will not be published. Required fields are marked *