ನವದೆಹಲಿ: ನಾಗಾಲ್ಯಾಂಡ್‍ನಲ್ಲಿ ಬಂಡುಕೋರರ ವಿರುದ್ಧ ಭದ್ರತಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಗುಂಡಿನ ದಾಳಿಗೆ ಸ್ಥಳೀಯರು ಬಲಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಏನು ಮಾಡುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಭದ್ರತಾ ಸಿಬ್ಬಂದಿ ನಾಗಾಲ್ಯಾಂಡ್‍ನ ಮೋನ್ ಜಿಲ್ಲೆಯಲ್ಲಿ ಬಂಡುಕೋರರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ 11 ಸ್ಥಳೀಯ ನಾಗರಿಕರು ಗುಂಡೇಟಿಗೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಡುಕೋರರು ಎಂದು ತಪ್ಪಾಗಿ ಭಾವಿಸಿ ಕೆಲ ನಾಗರಿಕರ ಮೇಲೆ ಗುಂಡು ಹಾರಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ದಂಗೆಕೋರರು ಎಂದು ಭಾವಿಸಿ ಗುಂಡಿನ ದಾಳಿ-13 ಮಂದಿ ದುರ್ಮರಣ
ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಇದು ಹೃದಯವಿದ್ರಾವಕ ಘಟನೆ. ಭಾರತ ಸರ್ಕಾರ ಘಟನೆ ಬಗ್ಗೆ ಸತ್ಯವನ್ನೇ ನುಡಿಯಬೇಕು. ನಮ್ಮದೇ ಭೂಮಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರಿಗೆ ರಕ್ಷಣೆ ಇಲ್ಲದಿರುವಾಗ ಗೃಹ ಸಚಿವಾಲಯ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 22,572 ಕೋಟಿ ರೂ ಪಾಕಿಸ್ತಾನಕ್ಕೆ ಸಾಲ ನೀಡಿದ ಸೌದಿ ಅರೇಬಿಯಾ
ಮೋನ್ ಜಿಲ್ಲೆಯ ಗಡಿಭಾಗದಲ್ಲಿ ಬಂಡುಕೋರರ ಚಟುವಟಿಕೆ ನಡೆಯುತ್ತಿದೆ ಎಂದು ಇಂಟೆಲಿಜೆನ್ಸ್ ನೀಡಿದ ಮಾಹಿತಿ ಆಧರಿಸಿ ಮೋನ್ ಜಿಲ್ಲೆಯ ಗಡಿ ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಘಟನೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಮಡಿದಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.