ಶಿಲ್ಲಾಂಗ್: ಮೇಘಾಲಯ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ನೇತೃತ್ವದಲ್ಲಿ 17 ಮಂದಿ ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಶಾಸಕರು ರಾತ್ರೋರಾತ್ರಿ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಈ ಸಂಬಂಧ ಸ್ಪೀಕರ್ ಮೆಟ್ಬಾ ಲಿಂಗ್ಡೋಹ್ ಅವರಿಗೆ ಮೇಘಾಲಯ ಶಾಸಕರು ಪತ್ರ ಬರೆದಿದ್ದಾರೆ. ಚುನಾವಣೆಯಲ್ಲಿ ಒಂದು ಸ್ಥಾನವನ್ನೂ ಗೆದ್ದಿರದ ತೃಣಮೂಲ ಕಾಂಗ್ರೆಸ್ ಈಗ ವಿಪಕ್ಷವಾಗಿ ಹೊರಹೊಮ್ಮಿದೆ.
ಮೇಘಾಲಯದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಪ್ರಮುಖ ವಿರೋಧ ಪಕ್ಷವಾಗಿ ಮಾಡುವ ಆಶಯವನ್ನು ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ್ದರು. ಸಂಯುಕ್ತ ವಿರೋಧ ಪಕ್ಷದ ಯೋಜನೆಗಳ ಬಗ್ಗೆಯೂ ಮಾತನಾಡಿದ್ದರು. ಇದನ್ನೂ ಓದಿ: ಯಶ್, ಪ್ರಶಾಂತ್ ನೀಲ್ ಬಳಿ ಕ್ಷಮೆ ಕೇಳಿದ ಅಮೀರ್ ಖಾನ್
ಮಮತಾ ಬ್ಯಾನರ್ಜಿ ಅವರು ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುತ್ತಾರೆಂಬ ಮಾತುಗಳಿದ್ದವು. ಆದರೆ ಅವರು ಸೋನಿಯಾರನ್ನು ಭೇಟಿಯಾಗಲಿಲ್ಲ.
ಈ ವಿಚಾರವಾಗಿ ತೃಣಮೂಲ ಕಾಂಗ್ರೆಸ್ ಪ್ರಮುಖರು ಪ್ರತಿಕ್ರಿಯಿಸಿ, ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವ ಯಾವುದೇ ಇಂಗಿತ ವ್ಯಕ್ತಪಡಿಸಿರಲಿಲ್ಲ. ಸದ್ಯ ಬ್ಯಾನರ್ಜಿ ಅವರು ಪಂಜಾಬ್ ಚುನಾವಣೆ ಕಡೆಗೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ತಿಳಿಸಿದ್ದರು. ಇದೇ ವಿಚಾರವಾಗಿ ಬ್ಯಾನರ್ಜಿ ಮಾತನಾಡಿದ್ದು, ನಾವು ಪ್ರತಿ ಬಾರಿ ಸೋನಿಯಾರನ್ನು ಏಕೆ ಭೇಟಿಯಾಗಬೇಕು? ಇದು ಸಾಂವಿಧಾನಿಕವಾಗಿ ಕಡ್ಡಾಯವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿಗೆ ಬಲಿ ಕೊಡೋದಕ್ಕೆ ಅಲ್ಪಸಂಖ್ಯಾತರೇ ಸಿಗೋದಾ: ಜಮೀರ್ ಪ್ರಶ್ನೆ
ಮುಂಬರುವ ಚುನಾವಣೆ ಹಿತದೃಷ್ಟಿಯಿಂದ ತ್ರಿಪುರ ಮತ್ತು ಗೋವಾ ರಾಜ್ಯಗಳಲ್ಲೂ ತನ್ನ ಪಕ್ಷವನ್ನು ವಿಸ್ತರಿಸಿಕೊಳ್ಳಲು ತೃಣಮೂಲ ಕಾಂಗ್ರೆಸ್ ಪ್ರಯತ್ನಿಸುತ್ತಿದೆ.