ನವದೆಹಲಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಂ ಖಾನಿಲ್ವಕರ್ ನೇತೃತ್ವದ ದ್ವಿ-ಸದಸ್ಯ ಪೀಠ ವಿಚಾರಣೆ ಮುಂದೂಡಿತು.
ಹಸಿರು ನ್ಯಾಯಾಧಿಕರಣಗಳಿಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಬಗೆಗೆ ಇರುವ ಅಧಿಕಾರಗಳ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಆದೇಶ ಬಾಕಿ ಇದ್ದು, ಈ ಹಂತದಲ್ಲಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೂಕ್ತವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಇಂತಹ ಕೆಟ್ಟ ಸರ್ಕಾರವನ್ನು ರಾಜಕೀಯ ಜೀವನದಲ್ಲಿ ನೋಡಿಲ್ಲ: ಸಿದ್ದರಾಮಯ್ಯ
ಕರ್ನಾಟಕ ಸರ್ಕಾರವು ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಕ್ರಮವಾಗಿ ಅಣೆಕಟ್ಟೆ ನಿರ್ಮಿಸುತ್ತಿದೆ ಎಂಬ ಪತ್ರಿಕಾ ವರದಿ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ದಕ್ಷಿಣದ ಹಸಿರು ಪೀಠ, ಮೇ 21ರಂದು ಸಮಿತಿಯೊಂದನ್ನು ರಚಿಸಿ ಸ್ಥಳ ಪರಿಶೀಲನೆಗಾಗಿ ಆದೇಶಿಸಿತ್ತು. ಮೇಕೆದಾಟು ಸ್ಥಳ ಪರಿಶೀಲನೆಗಾಗಿ ಸಮಿತಿ ರಚಿಸಿ ದಕ್ಷಿಣ (ಚೆನ್ನೈ) ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ದೆಹಲಿಯಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಧಿಕರಣಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಇದನ್ನೂ ಓದಿ: ಮಾನಮರ್ಯಾದೆ ಇಲ್ಲದ ಸರ್ಕಾರದ ವಿರುದ್ಧ ಜನರ ಧ್ವನಿಯಾಗಿ ಹೋರಾಟ: ಡಿ.ಕೆ ಶಿವಕುಮಾರ್
ಅರ್ಜಿ ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಚೆನೈ ಪೀಠ ನೀಡಿದ್ದ ಆದೇಶವನ್ನು ರದ್ದು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಈಗ ತಮಿಳುನಾಡು ಸುಪ್ರೀಂಕೋರ್ಟ್ ಮೇಲ್ಮನವಿ ಅರ್ಜಿ ಸಲ್ಲಿಸಿದೆ.