ಹೈದರಾಬಾದ್: ಸದಾ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕವೇ ಟ್ರೋಲ್‍ಗೆ ಒಳಗಾಗುವ ತೆಲುಗು ಹಿರಿಯ ನಟ ಹಾಗೂ ರಾಜಕಾರಣಿ ನಂದಮುರಿ ಬಾಲಕೃಷ್ಣ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಯಾರೆಂದು ನನಗೆ ಗೊತ್ತಿಲ್ಲ. ಭಾರತ ರತ್ನ ನನ್ನ ತಂದೆ ಎನ್.ಟಿ.ರಾಮರಾವ್ ಅವರ ಕಾಲಿನ ಬೆರಳಿನ ಉಗುರಿಗೆ ಸಮ ಎಂದಿದ್ದಾರೆ. ಈ ಮೂಲಕ ಸಖತ್ ಟ್ರೋಲ್‍ಗೆ ಒಳಗಾಗಿದ್ದಾರೆ.
ನನಗೆ ಎ.ಆರ್.ರೆಹಮಾನ್ ಯಾರೆಂದು ಗೊತ್ತಿಲ್ಲ, ನಾನು ಕೇರ್ ಮಾಡುವುದಿಲ್ಲ. ದಶಕಗಳ ಹಿಂದೆ ಅವರು ಹಿಟ್ ಹಾಡುಗಳನ್ನು ನೀಡಿ ಆಸ್ಕರ್ ಅವಾರ್ಡ್ ಪಡೆದಿರಬಹುದು. ಆದರೆ ಆಸ್ಕರ್ ಪ್ರಶಸ್ತಿ ಮಾತ್ರವಲ್ಲ ಭಾರತ ರತ್ನವನ್ನೂ ನಾನು ಗೌರವಿಸುವುದಿಲ್ಲ. ಭಾರತ ರತ್ನ ನಮ್ಮ ತಂದೆ ಎನ್.ಟಿ.ರಾಮ ರಾವ್ ಅವರ ಕಾಲ್ಬೆರಳಿನ ಉಗುರಿಗೂ ಸಮವಿಲ್ಲ. ಎಲ್ಲ ಪ್ರಶಸ್ತಿಗಳು ನನ್ನ ಪಾದಕ್ಕೆ ಸಮ ಎಂದು ಹೇಳಿದ್ದಾರೆ.
ಟಾಲಿವುಡ್‍ಗೆ ನಮ್ಮ ಕುಟುಂಬ ನೀಡಿದ ಕೊಡುಗೆಯನ್ನು ಯಾವುದೇ ಪ್ರಶಸ್ತಿ ಸರಿದೂಗಿಸಲು ಸಾಧ್ಯವಿಲ್ಲ. ಪ್ರಶಸ್ತಿಗಳು ಮಾತ್ರ ಕೆಟ್ಟದ್ದನ್ನು ಅನುಭವಿಸಬೇಕು. ನನ್ನ ಕುಟುಂಬ ಅಥವಾ ನನ್ನ ತಂದೆ ಅಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ಎ.ಆರ್.ರೆಹಮಾನ್ ಅವರು 1993ರಲ್ಲಿ ಬಾಲಕೃಷ್ಣ ಅವರ ನಿಪ್ಪು ರವ್ವಾ ಸಿನಿಮಾಗೆ ಹಿನ್ನೆಲೆ ಸಂಗೀತ ಕಂಪೋಸ್ ಮಾಡಿದ್ದರು. ಬಾಲಕೃಷ್ಣ ಅವರ ಸಂದರ್ಶನದ ವೀಡಿಯೋ ನೋಡುತ್ತಿದ್ದಂತೆ ರೆಹಮಾನ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.