ಮಡಿಕೇರಿ: ಕಾವೇರಿನಾಡು ಕೊಡಗಿನಲ್ಲಿ ಮತ್ತೆ ಮುಂಗಾರು ಹನಿ ಸಿಂಚನವಾಗಿದೆ. ಕಳೆದ ನಾಲ್ಕು ಐದು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಇಂದು ಮಧ್ಯಾಹ್ನ ಬಳಿಕ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗುತ್ತಿದೆ.
ಮುಂಜಾನೆಯಿಂದಲೇ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣದೊಂದಿಗೆ, 11 ಗಂಟೆ ಬಳಿಕ ನಿರಂತರವಾಗಿ ಹನಿ ಮಳೆ ಕಾಣಿಸಿಕೊಂಡಿದ್ದು, ಮತ್ತೆ ಜಿಲ್ಲೆಯಲ್ಲಿ ಮಳೆಗಾಲದ ವಾತಾವರಣ ಅನಾವರಣಗೊಂಡಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿ, ಚೇರಂಬಾಣೆ, ಭಾಗಮಂಡಲ, ನಾಪೋಕ್ಲು ಮಡಿಕೇರಿ ಸುತ್ತಮುತ್ತಲಿನ ಭಾಗದಲ್ಲೂ ಉತ್ತಮ ಮಳೆ ಆಗುತ್ತಿದೆ. ಕೊಡಗಿನಲ್ಲಿ ಜೂನ್ ತಿಂಗಳ ಮಳೆಯೊಂದಿಗೆ ಭತ್ತದ ಕೃಷಿ ಚಟುವಟಿಕೆಗಳು, ತೋಟಗಳಲ್ಲಿ ಕಾಫಿ ಗಿಡಗಳಿಗೆ ಗೊಬ್ಬರವನ್ನು ನೀಡುವ ಕಾರ್ಯ ಚುರುಕುಗೊಂಡಿದೆ. ಮತ್ತೆ ಮಳೆ ಅರಂಭವಾಗಿರುವುದರಿಂದ ಜಿಲ್ಲೆಯ ರೈತರಲ್ಲಿ ಮಳೆಗಾಲದ ಹರ್ಷದೊಂದಿಗೆ ಕಳೆದ ಮೂರು ವರ್ಷದ ಮಳೆಹಾನಿಯ ಕಹಿ ಅನುಭವವು ತಳುಕು ಹಾಕಿಕೊಳ್ಳತೊಡಗಿದೆ.
ಈ ಬಾರಿಯ ವರ್ಷಾಧಾರೆ ಮತ್ತೆ ಅಂತಹದ್ದೇ ವಿಕೋಪಗಳಿಗೆ ಕಾರಣವಾಗದಿರಲಿ ಎಂದು ಜನತೆ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಜೀವನದಿ ಕಾವೇರಿಯ ಒಡಲು ತುಂಬುವ ಕೊಡಗು ಜಿಲ್ಲೆಯಲ್ಲಿ ನದಿಗಳು ತುಂಬಿ ಹರಿದರೆ ಮಾತ್ರ ನೆರೆ ಜಿಲ್ಲೆ ಹಾಗೂ ರಾಜ್ಯದ ಕೋಟ್ಯಾಂತರ ಜನ ನೆಮ್ಮದಿಯಾಗಿರಲು ಸಾಧ್ಯವಾಗಲಿದೆ. ಈ ಬಾರಿ ಯಾವುದೇ ಅನಾಹುತವನ್ನು ಸೃಷ್ಟಿಸದೆ ಜನೋಪಕಾರಿ ಮಳೆಯಾಗಲಿ ಎಂದು ಪರಿಸರ ಪ್ರಿಯರು ಆಶಿಸುತ್ತಿದ್ದಾರೆ. ಇದನ್ನೂ ಓದಿ: 4 ಸಾವಿರ ಕೋಟಿ ಸಾರಿಗೆ ಇಲಾಖೆಗೆ ನಷ್ಟ ಉಂಟಾಗಿದೆ: ಡಿಸಿಎಂ