ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ ಇನ್ನಿಲ್ಲ- ಬಿಎಸ್‍ವೈ, ಡಿಸಿಎಂ ಸಂತಾಪ

Public TV
2 Min Read
B VIJAYAKRISHNA

ಬೆಂಗಳೂರು: ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ(71) ಇಂದು ಮುಂಜಾನೆ ನಗರದ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಜಯಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸಂತಾಪ ಸೂಚಿಸಿದ್ದಾರೆ.

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಿಜಯಕೃಷ್ಣ ಅವರು ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ 5.50ರ ಸುಮಾರಿಗೆ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ.

ಕರ್ನಾಟಕದ ಪರ ಆಡುತ್ತಿದ್ದ ಕೆ. ನಾಗಭೂಷಣ್ ಅವರ ಪ್ರೋತ್ಸಾಹದಿಂದ ಮೈದಾನಕಿಳಿದಿದ್ದ ವಿಜಯಕೃಷ್ಣ ಅತ್ಯುತ್ತಮ ಆಲ್ ರೌಂಡರ್ ಆಗಿ ಪ್ರದರ್ಶನ ನೀಡಿದ್ದರು. ಕಾರ್ ಶೆಡ್‍ನಲ್ಲಿ ಟೆನ್ನಿಸ್ ಬಾಲ್ ಮೂಲಕ ಬೌಲಿಂಗ್ ಅಭ್ಯಾಸ ಮಾಡಿಕೊಂಡ ವಿಜಯಕೃಷ್ಣ 1968-69ನೇ ಸಾಲಿನಲ್ಲಿ ಆಡಿದ ಮೊದಲ ರಣಜಿ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಮೂರು ವಿಕೆಟ್ ಪಡೆದಿದ್ದರು. ಅಲ್ಲದೇ ಬಳಿಕ ಮದ್ರಾಸ್ ವಿರುದ್ಧದ ಪಂದ್ಯದಲ್ಲಿ ಆರು ವಿಕೆಟ್ ಪಡೆದು ಸೈ ಎನ್ನಿಸಿಕೊಂಡಿದ್ದರು. ಇದನ್ನೂ ಓದಿ: ರೂಲ್ಸ್ ಬ್ರೇಕ್ – 100 ‘ಕೈ’ ಕಾರ್ಯಕರ್ತರ ಮೇಲೆ ಕೇಸ್

ಸದ್ಯ ವಿಜಯಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಮಾಜಿ ಕ್ರಿಕೆಟಿಗ ಬಿ.ವಿಜಯಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕ 2 ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನದಿಂದ ನಾಡು ಒಬ್ಬ ಅತ್ಯುತ್ತಮ ಕ್ರಿಕೆಟ್ ಆಟಗಾರನನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಇತ್ತ ಉಪಮುಖ್ಯಮಂತ್ರಿ ಡಾ. ಸಿ. ಎನ್ ಅಶ್ವಥ್ ನಾರಾಯಣ್ ಕೂಡ ಟ್ವೀಟ್ ಮಾಡಿ, ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಯಿತು. ಅವರ ಅತ್ಯುತ್ತಮ ಪ್ರದರ್ಶನದಿಂದ ಕರ್ನಾಟಕ 2 ಬಾರಿ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *