ಬೀದರ್: ಕೊರೊನಾ ಎರಡನೇ ಅಲೆಗೆ ಶಿಕ್ಷಕ ವೃಂದ ಅಕ್ಷರಶಃ ಬೆಚ್ಚಿ ಬಿದ್ದಿದೆ. ಗಡಿ ಜಿಲ್ಲೆಯಲ್ಲಿ ಒಟ್ಟು 55 ಜನ ಶಿಕ್ಷಕರು ಡೆಡ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಸಾವನ್ನಪ್ಪಿದ ಶಿಕ್ಷಕರಲ್ಲಿ ಬಹುತೇಕರು ಉಪ ಚುನಾವಣೆ ಹಾಗೂ ನಗರಸಭೆ ಚುನಾವಣೆಗಳಲ್ಲಿ ಭಾಗವಹಸಿದ್ದರು. ಚುನಾವಣೆ ಕೆಲಸದ ವೇಳೆಯೇ ಸೋಂಕು ತಗುಲಿತಾ, ಚುನಾವಣೆಯಿಂದಲೇ ಹೆಚ್ಚು ಶಿಕ್ಷಕರು ಸಾವನ್ನಪ್ಪಿದ್ದಾರಾ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಕಾಡತೊಡಗಿದೆ.
ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಅನುದಾನಿತ ಶಾಲೆಗಳ ಒಟ್ಟು 48 ಪ್ರೌಢ ಶಾಲಾ ಶಿಕ್ಷಕರು ಹಾಗೂ 7 ಜನ ಪ್ರಾಧ್ಯಾಪಕರು ಕೊರೊನಾಗೆ ಬಲಿಯಾಗಿದ್ದಾರೆ. ಬೀದರ್ ತಾಲೂಕಿನಲ್ಲಿ 16, ಬಸವಕಲ್ಯಾಣದಲ್ಲಿ 15, ಭಾಲ್ಕಿಯಲ್ಲಿ 7, ಔರಾದ್ ನಲ್ಲಿ 6, ಹುಮ್ನಬಾದ್ ನಲ್ಲಿ 4 ಶಿಕ್ಷಕರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಕೋವಿಡ್‍ಗೆ ಬಲಿಯಾಗಿರುವ ಬಹುತೇಕ ಶಿಕ್ಷಕಕರು ಏಪ್ರಿಲ್ 17ರಂದು ನಡೆದ ಬಸವಕಲ್ಯಾಣ ಉಪ ಚುನಾವಣೆ ಹಾಗೂ ಏಪ್ರಿಲ್ 27ರಂದು ನಡೆದ ನಗರಸಭೆ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಚುನಾವಣೆಯೇ ಶಿಕ್ಷಕರ ಸಾವಿಗೆ ಕಾರಣವಾಯಿತಾ ಎಂಬ ಪ್ರಶ್ನೆ ಎದ್ದಿದೆ.
ಈ ಚುನಾವಣೆಗಳು ಯಾರಿಗೆ ಬೇಕಿತ್ತು, ಚುನಾವಣೆಗಳಿಂದಾಗಿಯೇ ಶಿಕ್ಷಕರು ಕೋವಿಡ್‍ಗೆ ಬಲಿಯಾಗಿದ್ದಾರೆ. ಈ ಸಾವುಗಳಿಗೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಸಾವನ್ನಪ್ಪಿದ ಶಿಕ್ಷಕರ ಸಂಖ್ಯೆ ಇನ್ನೂ ಹೆಚ್ಚಿದೆ, ಶಿಕ್ಷಣ ಇಲಾಖೆ ನೈಜ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.