ಯಾವುದೇ ರಾಜ್ಯದಿಂದ ಬೆಂಗಳೂರಿಗೆ ಬಂದ್ರೂ ಕೋವಿಡ್ ವರದಿ ಕಡ್ಡಾಯ- ಸೋಂಕಿತರ ಕೈಗೆ ಸೀಲ್!

Public TV
3 Min Read
sudhakar meeting

ಬೆಂಗಳೂರು: ಏಪ್ರಿಲ್ 1 ರಿಂದ ಯಾವುದೇ ರಾಜ್ಯದಿಂದ ಬೆಂಗಳೂರಿಗೆ ಬಂದರೂ ಕೋವಿಡ್ ವರದಿ ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬಿಬಿಎಂಪಿ ಎಂಟು ವಲಯಗಳ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಒಂದೇ ದಿನ 1,400 ಸೋಂಕಿತರು ಪತ್ತೆಯಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಇದು ಅತಿ ಹೆಚ್ಚು. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಹೊರರಾಜ್ಯಗಳಿಂದ ಬರುತ್ತಿರುವವರಲ್ಲಿ ಹೆಚ್ಚಾಗಿ ಕೋವಿಡ್ ಸೋಂಕು ಕಂಡುಬರುತ್ತಿದೆ. ಕೇರಳ, ಮಹಾರಾಷ್ಟ್ರ, ಪಂಜಾಬ್ ಚಂಡೀಗಡದಿಂದ ರಾಜ್ಯಕ್ಕೆ ಬಂದವರಿಗೆ ಕೊರೊನಾ ಪರೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಯಾವುದೇ ರಾಜ್ಯದಿಂದ ಬಂದರೂ ಕೊರೊನಾ ವರದಿ ಕಡ್ಡಾಯಗೊಳಿಸಲಾಗಿದೆ ಎಂದರು.

ಸಭೆ, ಸಮಾರಂಭಗಳಿಗೆ ಒಳಾಂಗಣದಲ್ಲಿ 200, ಹೊರಾಂಗಣದಲ್ಲಿ 500 ಮಂದಿ ಸೇರಲು ಅವಕಾಶ ನೀಡಲಾಗಿದೆ. ಪ್ರತಿ ವಾರ್ಡ್ ಗೆ ಒಂದರಂತೆ ಅಂಬುಲೆನ್ಸ್ ನಿಯೋಜಿಸಲಾಗಿದೆ. ಸೋಂಕಿತರ ಸಂಖ್ಯೆ ನೋಡಿಕೊಂಡು ಅಂಬುಲೆನ್ಸ್ ಸಂಖ್ಯೆ ಕೂಡ ಹೆಚ್ಚಿಸಲಾಗುವುದು. ಸೋಂಕಿತರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು, ನಿಗಾ ಇರಿಸುವುದು ಮೊದಲಾದ ಕ್ರಮಗಳನ್ನು ನಿರ್ಧರಿಸಲಾಗುವುದು ಎಂದರು.

ಸೋಂಕು ನಿಯಂತ್ರಣಕ್ಕೆ ನಿಗದಿತ ಪ್ರದೇಶಗಳಲ್ಲಿ ಸ್ಯಾನಿಟೈಜ್ ಮಾಡಲಾಗುವುದು. ಹಾಸಿಗೆ, ಐಸಿಯು ಲಭ್ಯತೆ ಬಗ್ಗೆ ಆನ್‍ಲೈನ್ ನಲ್ಲೇ ಮಾಹಿತಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರನ್ನು ಕೋವಿಡ್ ಮುಕ್ತ ಮಾಡಲು ಜನರ ಸಹಕಾರ ಬೇಕಿದೆ ಎಂದರು.

ಸೋಂಕಿತರಿಗೆ ಸೀಲ್
ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಕೈಗೆ ಸೀಲ್ ಹಾಕಲು ನಿರ್ಧರಿಸಲಾಗಿದೆ. ಯುವಕರು, ರೋಗ ಲಕ್ಷಣ ಇಲ್ಲದವರು ಸೋಂಕಿತರಾದರೂ ಹೊರಗೆ ಓಡಾಡುವುದರಿಂದ ಸೋಂಕು ಹರಡುತ್ತದೆ. ಇದನ್ನು ನಿಯಂತ್ರಿಸಲು ಕೈಗೆ ಗುರುತು ಹಾಕಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ರೂಪಾಂತರಿ ವೈರಸ್
45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕೆಂದು ಆದೇಶವಾಗಿದೆ. ದೇಶದಲ್ಲಿ ರೂಪಾಂತರಿ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿದೆ. ಕೆಲವರಲ್ಲಿ ಹೊಸ ವೈರಾಣು ಕಾಣಿಸಿಕೊಂಡಿದ್ದು, ಸುಮಾರು 700 ಇಂತಹ ಪ್ರಕರಣ ಪತ್ತೆಯಾಗಿವೆ. ತಜ್ಞರ ಪ್ರಕಾರ ಇದು ಬಹಳ ಬೇಗ ಹರಡುತ್ತದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳಾಗುತ್ತಿವೆ. ಸಾರ್ವಜನಿಕರು ಮುಂದಿನ 2 ತಿಂಗಳು ಬಹಳ ಎಚ್ಚರಿಕೆಯಿಂದಿರಬೇಕು. ಸೋಂಕಿನ ಪ್ರಕರಣಗಳು ಹೆಚ್ಚಾಗಬಾರದು. ಒಂದು ಪ್ರಕರಣ ಕಂಡುಬಂದರೆ 20 ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದರು.

CORONA 8 medium

ಚುನಾವಣೆ ಎಂದಾಕ್ಷಣ ಕೊರೊನಾ ಬರದೇ ಇರುವುದಿಲ್ಲ. ಜನರು ಗುಂಪುಗೂಡುವುದನ್ನು ಕಡಿಮೆ ಮಾಡುವುದೇ ನಮಗೆ ಮುಖ್ಯ. ಹೀಗಾಗಿ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಲಾಗುವುದು. ಚಿತ್ರರಂಗದ ಕಲಾವಿದರಿಗೂ ಮನವಿ ಮಾಡಲಾಗಿದೆ. ನಾಯಕ ನಟರು ಕೂಡ ಸಾಮಾಜಿಕ ಕಳಕಳಿ ಹೊಂದಿದ್ದು, ಅವರು ಕೂಡ ಈ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ವಿಕ್ಟೋರಿಯಾದಲ್ಲಿ 400 ಹಾಸಿಗೆ ಮೀಸಲಿಡಲಾಗಿದೆ. ಪ್ರಕರಣ ಹೆಚ್ಚಿದರೆ ಹಾಸಿಗೆ ಸಂಖ್ಯೆ ಹೆಚ್ಚಿಸಲಾಗುವುದು. ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ಬೌರಿಂಗ್, ಚರಕ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗುವುದು. ರೋಗಿಗಳ ಸಂಖ್ಯೆ ಇನ್ನೂ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳ ಸಹಾಯ ಪಡೆಯಲಾಗುವುದು. ಈ ಕುರಿತು ಖಾಸಗಿ ಆಸ್ಪತ್ರೆಗಳೊಂದಿಗೆ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಈಗ ಪ್ರಕರಣ ಹೆಚ್ಚಿದರೂ ಮೊದಲಿನಷ್ಟು ತೀವ್ರತೆ ಇಲ್ಲ. ಆದರೂ ಎಚ್ಚರಿಕೆ ವಹಿಸಲೇಬೇಕು ಎಂದರು.

Corona 2

ಅಪಾರ್ಟ್ಮೆಂಟ್ ಗಳಲ್ಲಿ ಹೆಚ್ಚು ಪಾಸಿಟಿವ್ ಕಂಡುಬರುತ್ತಿದೆ. ಒಬ್ಬರಿಗೆ ಪಾಸಿಟಿವ್ ಆದರೆ ಆ ಕುಟುಂಬದ ಎಲ್ಲರಿಗೂ ಕೋವಿಡ್ ಬರುತ್ತಿದೆ. ಹೀಗಾಗಿ ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಥಿಯೇಟರ್, ಮದುವೆ ಛತ್ರ, ವಿವಿಧ ಕಾರ್ಯಕ್ರಮ ಗಳು, ಧಾರ್ಮಿಕ ಸ್ಥಳ, ಶಾಲಾ ಕಾಲೇಜು ಆವರಣದಲ್ಲಿ ಹೆಚ್ಚಾಗಿ ಮಾರ್ಷಲ್ ಗಳು ಹೋಗಿ ಗಮನಹರಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *